ಬನಹಳ್ಳಿ ಶುದ್ಧ ಕುಡಿವ ನೀರು ಘಟಕಕ್ಕೆ ಚಾಲನೆ
ಆನೇಕಲ್ಲು: ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯಲ್ಲಿ 100 ಶುದ್ಧ ಕುಡಿಯುವ ನೀರಿನ ಘಟಕಗಳನ್ನು
ಸ್ಥಾಪಿಸುವ ಗುರಿ ಇದ್ದು ಶೀಘ್ರದಲ್ಲಿ 50 ಘಟಕಗಳಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ತಾಲೂಕಿನ ಬೊಮ್ಮಸಂದ್ರ ಪಂಚಾಯ್ತಿ ಬನಹಳ್ಳಿಯಲ್ಲಿ ಸಂದಸರ ಅನುದಾನದಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮಾತನಾಡಿ ಆನೇಕಲ್ ತಾಲೂಕು ಸುತ್ತಮುತ್ತ ಕೈಗಾರಿಕೆಗಳಿದ್ದು ಲಕ್ಷಾಂತರ ಜನರಿದ್ದಾರೆ. ಅಂತರ್ಜಲ ಮಟ್ಟ ಸಹಸ್ರ ಅಡಿಗಳನ್ನು ಮೀರಿದ್ದು ಶುದ್ಧ ಕುಡಿಯುವ ನೀರು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಂಸದರ ನಿಧಿ ಜೊತೆಗೆ ದಾನಿಗಳ ನೆರವಿನಿಂದ ಇನ್ನಷ್ಟು ಘಟಕ ಸ್ಥಾಪಿಸುವ ಚಿಂತನೆಯಿದ್ದು ಉದ್ಯಮಿಗಳು ಹಾಗೂ ಸಮಾನ ಮನಸ್ಕರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ ಮುಖ್ಯ ಮಂತ್ರಿಗಳು ಹಾಗೂ ಸಾರಿಗೆ ಸಚಿವರ ಸಹಕಾರದಿಂದ ಆನೇಕಲ್ ತಾಲೂಕಿನ 15 ಎಂಎಲ್ಡಿ ಕಾವೇರಿ ನೀರು ದೊರೆಯುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಜನತೆಗೆ ತಲುಪಲಿದೆ. ಸಂಸದರ ನಿಧಿ ಜೊತೆಗೆ ಶಾಸಕರ ನಿಧಿಯನ್ನು ಜೋಡಿಸಿ ಪ್ರತಿ ಹಳ್ಳಿಗೂ ಶುದ್ಧ ಕುಡಿ ನೀರು ಪೂರೈಸುವ ಉದ್ದೇಶವಿದೆ. 1 ರು. ನಾಣ್ಯ ಹಾಕಿದರೆ 10 ಲೀಟರ್ ನೀರು ದೊರೆಯುತ್ತದೆ. ಗ್ರಾಮ ಪಂಚಾಯ್ತಿ ವತಿಯಿಂದ ಸ್ಥಳ ಗುರುತಿಸುವ ಕಾರ್ಯ ನಡೆಯಬೇಕೆಂದ ಅವರು ಸಂಪರ್ಕ ರಸ್ತೆ, ಬೀದಿ ದೀಪ, ಒಳ ಚರಂಡಿ ಕಾಮಗಾರಿಗೆ ಉತ್ತೇಜನ ನೀಡುವ ಮೂಲಕ ತಾಲೂಕನ್ನು ಪ್ರಗತಿ ಪಥದತ್ತ ಕೊಂಡೊಯ್ಯುವೆ ಎಂದರು.
ಬಮೂಲ್ ನಿರ್ದೇಶಕ ಆರ್. ಕೆ. ರಮೇಶ್, ಹಾಪ್ಕಾಮ್ಸ್ ನಿರ್ದೇಶಕ ಎಂ. ಬಾಬು, ಮುಖಂಡರಾದ ಲಿಂಗಣ್ಣ, ಗಟ್ಪಳ್ಳಿ ಸೀನಪ್ಪ, ಪುರುಷೋತ್ತಮ್, ನಾಗವೇಣಿ ಇದ್ದರು.