ಮಟ್ಕಾ ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ
ದೊಡ್ಡಬಳ್ಳಾಪುರ: ಇಲ್ಲಿನ ಹಲವು ಪ್ರದೇಶಗಳಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗಳ ಮೇಲೆ ಬುಧವಾರ ದಾಳಿ ನಡೆಸಿರುವ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಿಎಸೈ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಬಂಧಿತರನ್ನು ವಿಚಾರಣೆಗೊಳಪಡಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬಂಧಿತರನ್ನು ನಗರದ ಆಟೋಬಾಬು, ರಾಮದುರ್ಗ, ವೀರಭದ್ರನಪಾಳ್ಯದ ಪಿಳ್ಳಪ್ಪ ಮತ್ತು ಬಡಗಿ ರಘು ಎನ್ನಲಾಗಿದೆ. ನಗರಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಮಟ್ಕಾ ದಂಧೆ ಬಗ್ಗೆ ಪೊಲೀಸರು ಗಮನ ಹರಿಸುತ್ತಿಲ್ಲ. ಪೊಲೀಸರಿಗೆ ಗೊತ್ತಿದ್ದೇ ಕೆಲವು ಅಡ್ಡೆಗಳಲ್ಲಿ ಮಟ್ಕಾ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿದ್ದವು.
ಪೊಲೀಸ್ ಇಲಾಖೆ ನಡೆಸಿದ ಜನಸಂಪರ್ಕ ಸಭೆಯಲ್ಲಿ ಕೂಡ ಈ ಬಗ್ಗೆ ಸಾರ್ವಜನಿಕರು ಕೇಳಿದ್ದ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯಲ್ಲಿ ಸಮರ್ಪಕ ಉತ್ತರ ಇರಲಿಲ್ಲ. ವರ್ಷಗಳಿಂದ ನಡೆಯುತ್ತಿರುವ ಈ ದಂಧೆ ದಿನೇ ದಿನೇ ಮಿತಿಮೀರಿ ಬೆಳೆಯುತ್ತಿದ್ದರೂ ಕಾನೂನು ರೀತ್ಯ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬ ಆರೋಪಗಳೂ ಇವೆ. ಈ ಮಧ್ಯೆ ಈಗ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವಿಚಾರಣೆ ನಡೆಸಿ ದಂಧೆಯಲ್ಲಿ ತೊಡಗಿರುವ ಹಲವು ಪ್ರಭಾವಿಗಳನ್ನೂ ಬಂಧಿಸಬೇಕು. ದಂಧೆಯನ್ನು ಸಂಪೂರ್ಣವಾಗಿ ನಿಗ್ರಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.