ಮರಳು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ; ಮುಂದುವರಿದ ಧರಣಿ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ ಜ.22
ತಾಲೂಕಿನ ಶಿಂಷಾ ಮತ್ತು ಕಣ್ವ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ನಿಷೇಧಿಸುವಂತೆ ಆಗ್ರಹಿಸಿ ತಾಪಂ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ(ಹೆಗಡೆ) ಆರಂಭಿಸಿರುವ ಧರಣಿ ನಿರಶನ ಮೂರನೇ ದಿನಕ್ಕೆ ಕಾಲಿರಿಸಿದ್ದು, ಪ್ರತಿಭಟನೆ ಕೈಬಿಡುವಂತೆ ತಾಲೂಕು ಆಡಳಿತ ನಡೆಸಿದ ಮಾತುಕತೆ ವಿಫಲಗೊಂಡಿದೆ.
ಮಂಗಳವಾರ ತಹಸೀಲ್ದಾರ್ ನೇತೃತ್ವದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ, ಲೋಕೋಪಯೋಗಿ ಇಲಾಖೆ ಎಇಇ, ಅರಣ್ಯಾಧಿಕಾರಿ, ಗ್ರಾಮಾಂತರ ವೃತ್ತ ನಿರೀಕ್ಷಕ ಸೇರಿದಂತೆ ತಾಲೂಕು ಆಡಳಿತ ಸಿದ್ದರಾಮ ಹೆಗಡೆಯೊಂದಿಗೆ ಮಾತುಕತೆ ನಡೆಸಿದರು.
ಮರಳು ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ, ಪ್ರತಿಭಟನೆ ಕೈಬಿಡುವಂತೆ ತಹಸೀಲ್ದಾರ್ ಇ.ಶಿವರುದ್ರಯ್ಯ ತಾಲೂಕು ಆಡಳಿತದ ಪರವಾಗಿ ಮನವಿ ಮಾಡಿದರು. ಆದರೂ ತಹಸೀಲ್ದಾರ್ ಮನವಿಯನ್ನು ನಿರಾಕರಿಸಿದ ಸಿದ್ದರಾಮ ಹೆಗಡೆ, ಈ ಹಿಂದೆ ನಾಲ್ಕು ಬಾರಿ ನಾನು ಪ್ರತಿಭಟನೆ ನಡೆಸಿದಾಗಲೂ ಅಧಿಕಾರಿಗಳು ಇಂಥಹುದೇ ಆಶ್ವಾಸನೆ ನೀಡಿ ಪ್ರತಿಭಟನೆ ಹಿಂತೆಗೆಸಿದ್ದಾರೆ. ಶಿಂಷಾ ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧವಾಗಲಿಲ್ಲ. ಯಾವುದೇ ಕಾರಣಕ್ಕೂ ನ್ಯಾಯ ಸಿಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಉನ್ನತ ತನಿಖೆ ನಡೆಯಲಿ: 2000ನೇ ಇಸವಿಯಲ್ಲಿ ಸರ್ಕಾರ ಕಣ್ವ ಮತ್ತು ಶಿಂಷಾ ನದಿಯಲ್ಲಿ ಮರಳು ಗಣಿಗಾರಿಕೆಗೆ ನಿಷೇಧ ಹೇರಿದೆಯಾದರೂ, ಮರಳುಗಣಿಗಾರಿಕೆ ನಿಂತಿಲ್ಲ. ಮರಳು ಲೂಟಿಯಿಂದ ನದಿ ಪಾತ್ರವೇ ಬದಲಾಗಿದ್ದು ಹತ್ತಾರು ವರ್ಷಗಳಿಂದ ನಡೆದಿರುವ ಮರಳು ಗಣಿಗಾರಿಕೆಯ ಬಗ್ಗೆ ಸಿಬಿಐ, ಲೋಕಾಯುಕ್ತ ತನಿಖೆ ನಡೆಯಲೇ ಬೇಕು. ಈ ಸಂಬಂಧ ಸರ್ಕಾರದಿಂದ ಆದೇಶ ಬೀಳದ ಹೊರತು ನಾನು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದರು.
ತಹಸೀಲ್ದಾರ್ ಶಿವರುದ್ರಪ್ಪ ಮಾತನಾಡಿ, ಲೋಕಾಯುಕ್ತ ಮತ್ತು ಸಿಬಿಐ ತನಿಖೆಗೆ ಆದೇಶಿಸುವ ಅಧಿಕಾರ ನಮಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸುವುದಾಗಿ ತಿಳಿಸಿದರು.