'ವಾಂತಿ-ಭೇದಿಗೆ ಕರಳುಬೇನೆ ಕಾರಣ'
ಕ.ಪ್ರ.ವಾರ್ತೆ ರಾಮನಗರ ಜ.22
ಚನ್ನಪಟ್ಟಣ ತಾಲೂಕಿನ ಸಿದ್ದನಹಳ್ಳಿಹಲ್ಲಿ ವಾಂತಿ-ಭೇದಿಗೆ ಕರಳುಬೇನೆ ಕಾರಣ. ಗ್ರಾಮದಲ್ಲಿ 15 ಕರಳು ಬೇನೆ ಪ್ರಕರಣಗಳು ದಾಖಲಾಗಿದ್ದು, ಈಗ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ.ಕೆ.ಎಂ. ಶ್ರೀನಿವಾಸ್ ತಿಳಿಸಿದ್ದಾರೆ.
ಸಿದ್ದನಹಳ್ಳಿಯಲ್ಲಿ ವಾಂತಿ-ಭೇದಿ ಕುರಿತು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗೆ ಸ್ಪಷ್ಟನೆ ನೀಡಿರುವ ಅವರು, ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸಂಚಾರಿ ಘಟಕ ತೆರೆಯುವ ಮೂಲಕ ಚಿಕಿತ್ಸೆ ಮುಂದುವರೆಸಲಾಗಿದೆ ಎಂದಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ ಪೈಪ್ಲೈನ್ ಚರಂಡಿ ಪಕ್ಕವೇ ಇದೆ. ಪೈಪ್ಲೈನ್ ಶಿಥಿಲವಾಗಿದ್ದು, ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸೇರಿಕೊಂಡು ಕರಳುಬೇನೆ ತಂದೊಡ್ಡಿದೆ ಎಂದು ಡಾ.ಶ್ರೀನಿವಾಸ್ ವಿವರಿಸಿದ್ದಾರೆ. ಕೆಲ ಗೇಟ್ವಾಲ್ಗಳು ಹದಗೆಟ್ಟು ನೀರು ಸೋರಿಕೆ ಆಗುತ್ತಿದೆ. ಅಂತಹ ಕಡೆಯೂ ಕಲ್ಮಶಗಳು ನೀರಿನಲ್ಲಿ ಸೇರಿಕೊಳ್ಳುತ್ತಿವೆ ಎಂದಿದ್ದಾರೆ.
ಅರಿವು ಕಾರ್ಯಕ್ರಮ: ಬಿಸಿ ಬಿಸಿಯಾದ ಊಟ, ಕುದಿಸಿ ಆರಿಸಿದ ನೀರು ಸೇವನೆ ಮಾಡುವಂತೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗಿದೆ. ಕರಳುಬೇನೆ ವರದಿಯಾಗಿದ್ದವರ ಮನೆ ಸುತ್ತಲೂ ಚೆಲುವೆ ಪುಡಿ ಸಿಂಪಡಿಸಿ ಸೋಂಕು ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮಸ್ಥರಿಗೆ ಒಆರ್ಎಸ್ ಪೊಟ್ಟಣಗಳನ್ನು ವಿತರಣೆ ಮಾಡಲಾಗಿದೆ. ಗ್ರಾಮದಲ್ಲಿ ಜನರಿಗೆ ಕುಡಿಯಲು ಸರಬರಾಜು ಮಾಡುತ್ತಿರುವ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ.ಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.