ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನಪ್ರತಿನಿಧಿಗಳಿಂದ ರೈತರ ಒಗ್ಗಟ್ಟು ಒಡೆವ ಯತ್ನ'

Rashmi Kasaragodu
Updated On : 24 Jan 2014, 2:28 am

ಚನ್ನಪಟ್ಟಣ: ರಾಜಕಾರಣಿಗಳು ತಮ್ಮ ಅಧಿಕಾರದಾಹದಿಂದ ರೈತರಲ್ಲಿನ ಒಗ್ಗಟ್ಟನ್ನು ಮುರಿಯುತ್ತಿದ್ದು ಇಂತಹ ಕುಟಿಲ ವ್ಯವಸ್ಥೆಯ ವಿರುದ್ಧ ರೈತ ಜಾಗೃತನಾಗದ ಹೊರತು ರೈತರಿಗೆ ಉಳಿಗಾಲವಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಹೇಳಿದರು.
ತಾಲೂಕಿನ ಅಬ್ಬೂರು ಗ್ರಾಮದಲ್ಲಿ ನಡೆದ ರೈತಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಚುನಾವಣೆಯ ವೇಳೆ ಬಿಡಿಗಾಸು ನೀಡಿ ಗೆದ್ದು ಬರುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ಬಳಿಕ ರೈತರನ್ನು ಮರೆಯುತ್ತಾರೆ. ಮಾತುಮಾತಿಗೂ ರೈತ ನಮ್ಮ ಬೆನ್ನೆಲುಬು ಎಂದು ಬಡಬಡಿಸುವ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಕುರ್ಚಿಯಲ್ಲಿ ಕುಳಿತು ಈ ಬೆನ್ನು ಮೂಳೆಯನ್ನು ಮುರಿಯುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಶಾಹಿ ಮತ್ತ ಬಂಡವಾಳಶಾಹಿಗಳ ಅಪವಿತ್ರ ಮೈತ್ರಿಯಿಂದಾಗಿ ರೈತರು ನೆಮ್ಮದಿಯಿಂದ ಬದುಕಲಾಗದ ವಾತಾವರಣ ನಿರ್ಮಾಣಗೊಂಡಿದ್ದು ಹೋರಾಟ ಅನಿವಾರ್ಯವಾಗಿದೆ ಎಂದರು.
ರೈತರು ಎಚ್ಚೆತ್ತು ಹೋರಾಟದ ಹಾದಿ ಹಿಡಿಯದಿದ್ದಲ್ಲಿ ಜಮೀನು ಕಳೆದುಕೊಂಡು ಗುಲಾಮರಾಗಿ ನಿಲ್ಲಬೇಕಾಗುತ್ತದೆ. ಅನ್ನದಾತನನ್ನು ಬೀದಿಗೆ ತಳ್ಳಲು ಮುಂದಾಗಿರುವ ವ್ಯವಸ್ಥೆ ವಿರುದ್ಧ ನಾವೆಲ್ಲ ಸಂಗ್ರಾಮ ಸಾರಬೇಕಿದೆ ಎಂದರು. ರಾಜ್ಯ ವಿಭಾಗಿಯ ಉಪಾಧ್ಯಕ್ಷ ಎಂ.ರಾಮು ಮಾತನಾಡಿ, ರೈತರ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹತ್ತಾರು ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡುತ್ತಾರೆ. ಆದರೆ ಈ ಹಣ ರೈತರನ್ನು ತಲುಪುತ್ತಿಲ್ಲ. ಸರ್ಕಾರ ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಹಣ ಏನಾಯ್ತು? ನಮ್ಮ ಪಾಲಿನ ಹಣ ತಿಂದವರು ಯಾರು ಎಂದು ಆಲೋಚಿಸಬೇಕಿದೆ ಎಂದರು. ಮಂಡ್ಯ ಜಿಲ್ಲಾಧ್ಯಕ್ಷ ನರಸರಾಜು ಮಾತನಾಡಿ, ರೈತ ಸಂಘದ ಬಗ್ಗೆ ಕೆಲವರು ಉದಾಸೀನವಾಗಿ ಮಾತನಾಡುತ್ತಾರೆ. ಹಿಂದೆ ರೈತ ನಾಯಕರಾದ ಪ್ರೊ.ನಂಜುಂಡಸ್ವಾಮಿ ಮತ್ತು ಸುಂದರೇಶನ್ ರೈತರ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡದಿದ್ದರೆ ಇಂದು ರೈತರು ಬೀದಿಗೆ ಬೀಳಬೇಕಾಗಿತ್ತು ಎಂದರು.
ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಾಜು, ರಾಜ್ಯ ವಿಭಾಗೀಯ ಕಾರ್ಯದರ್ಶಿ ರಾಮಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಸೋರೆಕಾಯಿದೊಡ್ಡಿ ಸಿದ್ಧೇಗೌಡ, ತಾಲೂಕು ಕಾರ್ಯಾಧ್ಯಕ್ಷ ಎಚ್.ಸಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ನಾಗೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement