ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನರೊಂದಿಗೆ ಅನುಚಿತ ವರ್ತನೆ: ಅಪರ ಡಿಸಿ ವಿರುದ್ಧ ಕ್ರಮಕ್ಕೆ ಮನವಿ

Rashmi Kasaragodu
Updated On : 24 Jan 2014, 2:28 am

ರಾಮನಗರ: ಜಿಲ್ಲಾಧಿಕಾರಿ ಕಚೇರಿಗೆ ಬರುವ ರೈತರು, ಸಾರ್ವಜನಿಕರೊಡನೆ ಅನುಚಿತವಾಗಿ ವರ್ತಿಸುತ್ತಿರುವ ಅಪರ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಜಿ. ಕುಮಾರ್ ಮಾತನಾಡಿ, ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರ ಅನುಚಿತ ವರ್ತನೆ ಬಗ್ಗೆ ನಾಗರಿಕರಿಂದ ಅನೇಕ ದೂರುಗಳು ಬಂದಿವೆ. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕುರ್ಚಿಯನ್ನೂ ಕೊಡದೆ ತೀರಾ ನಿಕೃಷ್ಟವಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್ ರೈ ಅವರು ತಾವು ಸಲ್ಲಿಸಿದ್ದ ಕಡತದ ಬಗ್ಗೆ ಸಂಬಂಧಪಟ್ಟ ದ್ವಿತೀಯ ದರ್ಜೆ ಗುಮಾಸ್ತರ ಬಳಿ ಕುಳಿತು ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ಕಚೇರಿ ಪರಿಶೀಲನೆಗೆಂದು ಆಗಮಿಸಿದ ಅಪರ ಜಿಲ್ಲಾಧಿಕಾರಿ ಕುರ್ಚಿ ಹಾಕಿದ್ದೇಕೆ ಎಂದು ಸದರಿ ಗುಮಾಸ್ತರ ಮೇಲೆ ಹರಿಹಾಯ್ದದ್ದಲ್ಲದೆ ಪ್ರಕಾಶ್ ರೈ ಅವರ ಬಳಿ ಅನುಚಿತವಾಗಿ ವರ್ತಿಸಿದ್ದಾರೆ. ಸಂಘಟನೆಯ ಕಾರ್ಯಾಧ್ಯಕ್ಷರಿಗೇ ಈ ಗತಿಯಾದರೆ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಅಪರ ಜಿಲ್ಲಾಧಿಕಾರಿಗಳ ಆಟಾಟೋಪ ಬ್ರಿಟೀಷರ ಆಳ್ವಿಕೆಯನ್ನು ನೆನಪಿಗೆ ತರುತ್ತಿದೆ. ಸರ್ಕಾರಿ ಕಚೇರಿಗಳಿರುವುದೇ ಸಾರ್ವಜನಿಕರಿಗಾಗಿ, ಅಧಿಕಾರಿಗಳಿರುವುದು ಸಾರ್ವಜನಿಕರ ಸೇವೆಗಾಗಿ. ಅಧಿಕಾರದ ಮದದಿಂದ ಸಾರ್ವಜನಿಕರನ್ನು ಹೀನಾಯವಾಗಿ ನಡೆಸಿಕೊಂಡರೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಅನುಚಿತವಾಗಿ ನಡೆದುಕೊಂಡಿರುವ ಅಪರ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇದೇ ವರ್ತನೆ ಮತ್ತೊಮ್ಮೆ ಪುನರಾವರ್ತನೆಯಾದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಡಿ.ಜಿ. ಕುಮಾರ್ ತಿಳಿಸಿದರು. ನಿಯೋಗದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರವಿ, ಪದಾಧಿಕಾರಿಗಳಾದ ಕೆ.ವಿ.ಆನಂದ್, ಕೆ.ರಮೇಶ್, ರಾಜೇಂದ್ರ, ರೇವಣ್ಣ, ಶ್ರೀನಿವಾಸ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement