ದೇಹ ದಾನದ ಬಗ್ಗೆ ಜಾಗೃತಿಗಾಗಿ ಫೆ.2ರಂದು ಮಿನಿ ಮ್ಯಾರಥಾನ್
ರಾಮನಗರ: ಮನುಷ್ಯನ ಮರಣಾನಂತರ ದೇಹವನ್ನು ದಾನ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.2ರಂದು ನಗರದಲ್ಲಿ ಮಿನಿ ಮ್ಯಾರಥಾನ್ ಓಟ ಆಯೋಜಿಸಲಾಗಿದೆ ಎಂದು ಯೆಲ್ಲೋ ಅಂಡ್ ರೆಡ್ ಫೌಂಡೇಷನ್ನ ಅಮಿತ್ರಾಜ್ ಶಿವ ತಿಳಿಸಿದರು. ರಾಮನಗರದಲ್ಲಿ ಇದೇ ಪ್ರಥಮ ಬಾರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಏರ್ಪಡಿಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ 300ಕ್ಕೂ ಹೆಚ್ಚು ಮಂದಿ ಈ ಮ್ಯಾರಥಾನ್ನಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪ್ರತಿ ದಿನ 300ಕ್ಕೂ ಹೆಚ್ಚು ವಿವಿಧ ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಮರಣಾನಂತರ ನೇತ್ರಗಳು ಮತ್ತು ಇತರೆ ಅಂಗಾಂಗ ದಾನ ಮಾಡುವುದರಿಂದ ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ಜೀವ ಉಳಿಸಬಹುದು. 2 ಲಕ್ಷ ಕಿಡ್ನಿಗಳು, 50 ಸಾವಿರ ಯಕೃತ್ಗಳು, 50 ಸಾವಿರ ಹೃದಯದ ಕಸಿಗೆ ಬೇಡಿಕೆ ಇದೆ. ಆದರೆ ದಾನಿಗಳ ಸಂಖ್ಯೆ ಕೇವಲ ಶೇ.2ರಿಂದ 3ರಷ್ಟಿದೆ ಎಂದರು. ಬ್ರೈನ್ಡೆಡ್ನಿಂದ ಸಾವನ್ನಪ್ಪಿದವರಿಂದ ಕಣ್ಣು ಸೇರಿದಂತೆ 37 ಅಂಗಾಂಗ ಉಪಯೋಗಕ್ಕೆ ಬರುತ್ತವೆ. ಕನಿಷ್ಠ 8 ಮಂದಿಯ ಜೀವ ಉಳಿಸಬಹುದು. ಅಂಗಾಂಗಗಳ ದಾನದ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ಇದೆ. ಹೀಗಾಗಿಯೆ ನಮ್ಮ ಸಂಸೆ ಜಾಗೃತಿ ಓಟವನ್ನು ಹಮ್ಮಿಕೊಂಡಿದೆ ಎಂದರು. ಫೆ.2ರಂದು ನಗರದಲ್ಲಿ ನಡೆಯುವ ಮಿನಿ ಮ್ಯಾರಥಾನ್ನಲ್ಲಿ 5 ಕಿ.ಮೀ., 10 ಕಿ.ಮೀ. ಮತ್ತು ಹಿರಿಯರಿಗೆ 5 ಕಿ.ಮೀ. 3 ವಿಭಾಗದಲ್ಲಿ ಓಟ ನಡೆಯಲಿದೆ. ಫೆ.2ರಂದು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಬೆಳಗ್ಗೆ 6.30ಕ್ಕೆ ಮ್ಯಾರಥಾನ್ ಆರಂಭವಾಗಲಿದೆ. 5 ಮತ್ತು 10 ಕಿಮೀ ಓಟದ ಮಾರ್ಗ ಈಗಾಗಲೆ ಸೂಚಿತಗೊಂಡಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂದೇಶ್ ಹನುಮೇಲಿಂಗು, ವಿಜಯ್ ಮುನಿರಾಜ್, ಜಯಕುಮಾರ್, ನಯನ, ನವೀನ್ ಹಾಜರಿದ್ದರು.