ಬೆಟ್ಟ ಅಗೆದು ಇಲಿ ಹಿಡಿದ ತಾಲೂಕು ಆಡಳಿತ
ಮತ್ತೀಕೆರೆ ಜಯರಾಮ್
ರಾಮನಗರ: ಇಗ್ಗಲೂರು ಬಳಿ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಚನ್ನಪಟ್ಟಣ ತಾಲೂಕು ಆಡಳಿತ ನಡೆಸಿದ ಕಾರ್ಯಾಚರಣೆ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಮರಳು ದಂಧೆಕೋರರು ನೀರಿನಲ್ಲಿ ಹುದುಗಿಸಿಟ್ಟ ಒಂದೇ ಒಂದು ಕೊಪ್ಪರಿಕೆಯನ್ನೂ ಕದಲಿಸದ ಅಧಿಕಾರಿಗಳ ತಂಡ ಬಿದಿರು ಬೊಂಬಿನ ತೆಪ್ಪಗಳನ್ನು ಸುಟ್ಟು ಕಣ್ಣೊರೆಸುವ ನಾಟಕವಾಡಿದೆ.
ಶಿಂಷಾ ನದಿ ಪಾತ್ರದ ಅಕ್ರಮ ಮರಳು ದಂಧೆಗೆ ಚನ್ನಪಟ್ಟಣ ತಾಲೂಕು ಆಡಳಿತದ್ದೇ ಕುಮ್ಮಕ್ಕಿದೆ ಎನ್ನುವ ಟೀಕೆ ವ್ಯಾಪಕವಾಗಿದೆ. ಈಚೆಗೆ ನಡೆದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲೂ ಮದ್ದೂರು ಅಧಿಕಾರಿಗಳ ತಂಡಕ್ಕೆ ಚನ್ನಪಟ್ಟಣ ತಾಲೂಕು ಆಡಳಿತ ಸಾಥ್ ನೀಡಿರಲಿಲ್ಲ. ಈಗ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎನ್ನುವ ಮತ್ತೊಂದು ಕೆಲಸವಾಗಿದೆ.
ಬಿಸಿ ಮುಟ್ಟಿಸಿದ ಡಿಸಿ: ಇಗ್ಗಲೂರು ಸೇರಿದಂತೆ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ, ಪರಿಸರವಾದಿಗಳ ಪ್ರತಿಭಟನೆ, ದೂರುಗಳ ಸುರಿಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಡಿ.ಎಸ್.ವಿಶ್ವನಾಥ್ ಗುರುವಾರ ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಧೀನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಶಿಂಷಾ ನದಿ ಪಾತ್ರದುದ್ದಕ್ಕೂ ಸೆಕ್ಷನ್ 144 ಅನ್ವಯ ಮರಳುಗಾರಿಕೆಗೆ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ. ಇಷ್ಟಾಗಿಯೂ ಅಲ್ಲಿ ಹೇರಳ ಪ್ರಮಾಣದಲ್ಲಿ ಮರಳು ಲೂಟಿ ಆಗುತ್ತಿರುವ ಕುರುಹುಗಳನ್ನು ಕಂಡು ಸ್ವತಃ ಜಿಲ್ಲಾಧಿಕಾರಿ ಹೌಹಾರಿದ್ದಾರೆ. ಕಡಿವಾಣ ಹಾಕದ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.
ಅಣಕು ಪ್ರದರ್ಶನವಾಯ್ತು: ಜಿಲ್ಲಾಧಿಕಾರಿ ಗರಂ ಆಗಿದ್ದರಿಂದ ಕೊಂಚ ಬೆಚ್ಚಿದ್ದ ಚನ್ನಪಟ್ಟಣದ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ವಿರುದ್ಧ ನಡೆಸಿದ ಕಾಟಾಚಾರದ ಕಾರ್ಯಾಚರಣೆಯು ಥೇಟ್ ಅಣಕು ಪ್ರದರ್ಶನದಂತಿತ್ತು. ಮರಳುಗಾರಿಕೆಗೆ ಬಳಸುತ್ತಿದ್ದ ಕೊಪ್ಪರಿಕೆಗಳು, ವಸ್ತುಗಳು ಕಣ್ಣಿಗೆ ರಾಚುತ್ತಿದ್ದರೂ ಯಾರೊಬ್ಬರೂ ಅವನ್ನು ವಶಪಡಿಸಿಕೊಳ್ಳುವ ಗೋಜಿಗೆ ಹೋಗಲೇ ಇಲ್ಲ.ಮೇಲಧಿಕಾರಿ ಆದೇಶ ಪಾಲಿಸಬೇಕೆನ್ನುವ ಕಾರಣಕ್ಕೆ ತಂಡದಲ್ಲಿದ್ದ ಬಹುತೇಕ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ನದಿ ಪಾತ್ರದಲ್ಲಿ ಅಡ್ಡಾಡಿದರು. ದಂಧೆಕೋರರನ್ನು ಮಟ್ಟ ಹಾಕಿ, ಪ್ರಾಕೃತಿಕ ಸಂಪತ್ತನ್ನು ಸಂರಕ್ಷಿಸುವ ಕಾಳಜಿ ಕಿಂಚಿತ್ತೂ ಕಾಣಬರಲಿಲ್ಲ. ಮರಳು ಹೇರಿಕೊಂಡು ದಡ ಮುಟ್ಟಲು ಬಳಸುತ್ತಿದ್ದ ಬಿದಿರು ಬಂಬಿನ ನಾಲ್ಕೈದು ತೆಪ್ಪಗಳನ್ನಷ್ಟೇ ಸುಟ್ಟು ಹಾಕಲಾಯಿತು.
ಕೊಪ್ಪರಿಕೆಗೆ ವಿನಾಯ್ತಿ: ಅಕ್ರಮ ಮರಳುಗಾರಿಕೆಯಲ್ಲಿ ಬಳಸುವ ಕೊಪ್ಪರಿಕೆಗಳನ್ನು ದಂಧೆಕೋರರು ನದಿ ನೀರಿನಲ್ಲೇ ಮುಳುಗಿಸಿಟ್ಟಿದ್ದರು. ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಮದ್ದೂರಿನ ಅಧಿಕಾರಿಗಳು ಆ ತಾಲೂಕಿನ ಸರಹದ್ದಿನ ಎಲ್ಲ ಕೊಪ್ಪರಿಕೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಚನ್ನಪಟ್ಟಣದ ಅಧಿಕಾರಿಗಳು ಕೊಪ್ಪರಿಕೆಗಳನ್ನು ವಶಪಡಿಸಿಕೊಳ್ಳುವ ಮಾತು ಹಾಗಿರಲಿ, ಕಡೇ ಪಕ್ಷ ನೀರಿಗೆ ಇಳಿದಿರಲೂ ಇಲ್ಲ.
ಮದ್ದೂರು ಅಧಿಕಾರಿಗಳು ವಶಪಡಿಸಿಕೊಂಡ ಮೇಲೆ ಕಾರ್ಯಾಚರಣೆಯಲ್ಲಿ ತಮ್ಮದೂ ಪಾತ್ರವಿದ್ದು, ವಶಪಡಿಸಿಕೊಂಡ ಕೊಪ್ಪರಿಕೆಗಳಲ್ಲಿ ಪಾಲು ನೀಡಬೇಕೆಂದು ಪಟ್ಟು ಹಿಡಿದಿದ್ದರು. ಈಗ ಚನ್ನಪಟ್ಟಣದ ಅಧಿಕಾರಿಗಳ ದೊಡ್ಡ ದಂಡು ಕಾರ್ಯಾಚರಣೆಗೆ ಇಳಿದಿತ್ತಾದರೂ ಕಣ್ಣಿಗೆ ಬಿದ್ದ ಹತ್ತಾರು ಕೊಪ್ಪರಿಕೆಗಳಲ್ಲಿ ಒಂದನ್ನೂ ಸ್ವಾಧೀನಪಡಿಸಿಕೊಳ್ಳಲಿಲ್ಲ.
ದಂಧೆಗೆ ಅಲ್ಪ ವಿರಾಮ: ಜಂಟಿ ಕಾರ್ಯಾಚರಣೆ ನಂತರವೂ ಚನ್ನಪಟ್ಟಣ ತಾಲೂಕಿನ ಸರಹದ್ದಿನಲ್ಲಿ ಮರಳು ಲೂಟಿ ಮುಂದುವರೆದಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ, ಪ್ರತಿಭಟನೆ ಬಳಿಕ ಎಚ್ಚೆತ್ತ ದಂಧೆಕೋರರು ಲೂಟಿಗೆ ಅಲ್ಪ ವಿರಾಮ ನೀಡಿದ್ದರು. ಒಂದೊಮ್ಮೆ ಮರಳುಗಾರಿಕೆ ತಾತ್ಕಾಲಿಕ ಸ್ಥಗಿತಕ್ಕೆ ಮುನ್ನವೇ ಭೇಟಿ ನೀಡಿದ್ದರೆ ಜಿಲ್ಲಾಧಿಕಾರಿಗೆ ಅಲ್ಲಿನ ಪರಿಸ್ಥಿತಿ ಮನದಟ್ಟಾಗುತ್ತಿತ್ತು. ಅಕ್ರಮ ಮರಳುಗಾರಿಕೆ ವಿಷಯದಲ್ಲಿ ಚನ್ನಪಟ್ಟಣ ತಾಲೂಕು ಆಡಳಿತದ ವೈಫಲ್ಯ ಮನದಟ್ಟಾದ ಬಳಿಕ ಸ್ವತಃ ಜಿಲ್ಲಾಧಿಕಾರಿಯೇ ಮೈದಾನಕ್ಕೆ ಇಳಿದಿದ್ದಾರೆ. ವಿಶ್ವನಾಥ್ ಅವರಿಗೆ ದಂಧೆಕೋರರಿಗಿಂತಲೂ ಅಧೀನ ಅಧಿಕಾರಿಗಳೇ ಸವಾಲಾಗಿದ್ದಾರೆ. ಅಕ್ರಮ ಮರಳು ಮಾಫಿಯಾಕ್ಕೆ ಅಂತ್ಯವಾಡುವಲ್ಲಿ ವಿಶ್ವನಾಥ್ ಯಶಸ್ವಿ ಆಗಲು ಸಾಕಷ್ಟು ಕಸರತ್ತು ನಡೆಸಬೇಕಿದೆ.
ಶಿಂಷಾ ನದಿ ಪಾತ್ರದಲ್ಲಿ ಮರಳು ಮಾಫಿಯಾವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜಂಟಿ ಕಾರ್ಯಾಚರಣೆ ಮುಂದುವರೆಸಲು ಮಂಡ್ಯ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ. ನೀರಾವರಿ ಇಲಾಖೆಯಲ್ಲಿರುವ ಯಂತ್ರ ಚಾಲಿತ ಬೋಟ್, ನುರಿತ ಈಜುಗಾರರನ್ನು ಕರೆಸಿಕೊಂಡು ಕೊಪ್ಪರಿಕೆಗಳನ್ನೆಲ್ಲಾ ಮೇಲೆತ್ತಿ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಮರಳು ಲೂಟಿಕೋರರ ಜತೆ ರಾಜಿ ಪ್ರಶ್ನೆಯೇ ಇಲ್ಲ.
ಟಿ ಡಿ.ಎಸ್.ವಿಶ್ವನಾಥ್, ಜಿಲ್ಲಾಧಿಕಾರಿ, ರಾಮನಗರ.