ಶಿಕ್ಷಕರ ಸಮಸ್ಯೆಗಳ ಹೋರಾಟ ಮುಂದುವರಿಸುವೆ: ಪುಟ್ಟಣ್ಣ
ರಾಮನಗರ: ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಕಳೆದ ಹತ್ತು ವರ್ಷದಿಂದಲೂ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಶಿಕ್ಷಕರ ವಿಷಯಾಧಾರಿತ ಸಮಸ್ಯೆಗಳನ್ನು ಬಗೆಹರಿಸಲು ಇನ್ನು ಮುಂದೆಯೂ ಹೋರಾಟ ಮುಂದುವರೆಸುವುದಾಗಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಜೂನ್ನಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಮತಯಾಚಿಸಿದ ನಂತರ ಮಾತನಾಡಿದ ಅವರು, ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಜಾತಿ, ಧರ್ಮ, ಪ್ರದೇಶವನ್ನು ಪರಿಗಣಿಸದೆ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುವೆ ಎಂದು ಆಶ್ವಾಸನೆ ನೀಡಿದರು.
ಹಿಂದೆ ನಡೆಸಿದ ಹೋರಾಟಕ್ಕೆ ಮಣಿದ ಬಿಜೆಪಿ ಸರ್ಕಾರ ಅನುದಾನ ರಹಿತ ಶಿಕ್ಷಕರ ಬೇಡಿಕೆಯನ್ನು ಮಾನ್ಯ ಮಾಡಿದ್ದರಿಂದ ಸುಮಾರು 10 ಸಾವಿರ ಶಿಕ್ಷಕರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ವರ್ಗಾವಣೆ ನೀತಿಯ ಬದಲಾವಣೆಗೆ ಶ್ರಮಿಸಿದ್ದೇನೆ. ಶಿಕ್ಷಕರ ವೇತನ ಸೇರಿದಂತೆ ಇನ್ನಿತರೆ ಭತ್ಯೆಗಳ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸಿದ್ದೇನೆ ಎಂದು ಹೇಳಿದರು.
ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ 5 ಸಾವಿರ ಶಿಕ್ಷಕರಷ್ಟೇ ನೋಂದಣಿ ಮಾಡಿಕೊಂಡಿದ್ದರು. ಪ್ರಸ್ತುತ ಈ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸಿದ್ದೇವೆ. ಸಮಾಜವನ್ನು ತಿದ್ದುವ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರು ತಮ್ಮ ಅಮೂಲ್ಯವಾದ ಮತವನ್ನು ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಹಗಲಿರುಳು ದುಡಿಯುತ್ತಿರುವವರಿಗೆ ನೀಡಿ ಎಂದು ಮನವಿ ಮಾಡಿದರು.
ಶಿಕ್ಷಕರ ಜ್ವಲಂತ ಸಮಸ್ಯೆಗಳಾದ ನಿರಂತರ ಮೌಲ್ಯಮಾಪನ, ಅನ್ಯ ಕಾರ್ಯಗಳಿಗೆ ನಿಯೋಜಿಸುವುದು, ವೇತನ, ಭತ್ಯೆಗಳನ್ನು ಹೆಚ್ಚಿಸುವುದು, ಪರೀಕ್ಷೆ, ಮೌಲ್ಯಮಾಪನ ಭತ್ಯೆ ಹೆಚ್ಚಿಸುವುದು, ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ನೀವು ನನಗೆ ಶಕ್ತಿ ನೀಡಬೇಕು ಎಂದು ವಿನಂತಿಸಿದರು.
ಈ ವೇಳೆ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಲ್. ವನರಾಜು, ಶಾಲೆಯ ಮುಖ್ಯೋಪಾಧ್ಯಾಯ ಎಸ್.ಪಿ. ಹೂದ್ಲೂರು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಉಪನ್ಯಾಸಕರಾದ ಜಿ. ಶಿವಣ್ಣ, ಸಿದ್ದರಾಜು, ಸುನಿಲ್, ಆರಾಧ್ಯ, ನಾಗರಾಜ್ ಮತ್ತಿತರರು ಹಾಜರಿದ್ದರು.