5 ದಶಕದ ಹೋರಾಟಕ್ಕೆ ಕೊನೆಗೂ ಸಿಕ್ತು ನ್ಯಾಯ
ದೊಡ್ಡಬಳ್ಳಾಪುರ: ಇದೊಂದು ಐತಿಹಾಸಿಕ ಜಯ. 5 ದಶಕಗಳ ಅನ್ಯಾಯಕ್ಕೆ ಕೊನೆಗೂ ಜಯಸಿಕ್ಕಿದೆ. ದೊಡ್ಡಬಳ್ಳಾಪುರಕ್ಕೆ ನ್ಯಾಯಯುತವಾಗಿ ಸೇರಬೇಕಿದ್ದ ಉಪವಿಭಾಗಾಧಿಕಾರಿ ಕಚೇರಿ ಮೂಲಭೂತವಾಗಿ ಕಾರ್ಯನಿರ್ವಹಿಸಬೇಕಾದ ನೆಲೆಯಲ್ಲಿ ಕಾರ್ಯನಿರ್ವಹಿಸುವ ಆಶಯದ ಆದೇಶ ಸರ್ಕಾರದಿಂದ ಹೊರಟಿದೆ. ಆದೇಶ ಪ್ರತಿ ಕೈ ಸೇರುತ್ತಿದ್ದಂತೆ ದೊಡ್ಡಬಳ್ಳಾಪುರದಲ್ಲಿ ವಿಜಯೋತ್ಸವ ಮುಗಿಲು ಮುಟ್ಟಿದೆ.
ತಾಲೂಕಿನ ಮತ್ತು ನೆರೆಯ ತಾಲೂಕುಗಳ ಗ್ರಾಮಾಂತರ ಪ್ರದೇಶದ ಜನತೆ ಪ್ರತಿಯೊಂದು ಹಂತದಲ್ಲೂ ಸಣ್ಣಪುಟ್ಟ ವಿಚಾರಗಳಿಗೂ ಬೆಂಗಳೂರಿನಲ್ಲಿದ್ದ ಕಚೇರಿಗೆ ದಿನಗಟ್ಟಲೆ ಅಲೆಯುವ ದುರ್ದೈವಕ್ಕೆ ಈ ಆದೇಶದಿಂದ ತಿಲಾಂಜಲಿಯಾಗಿದೆ. ಇದು ರೈತರು, ಗ್ರಾಮಾಂತರ ಪ್ರದೇಶ ಜನರು, ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ಹಂತದ ಸಾರ್ವಜನಿಕರಿಗೆ ಸಂತಸದ ವಿಷಯವಾಗಿದೆ.
ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಶಕ್ತಿ ಸೇರಿದಂತೆ ಕೆಲ ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ತಹಶೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಬೆಳಗ್ಗೆ ಆರಂಭವಾಗಿದ್ದ ಪ್ರತಿಭಟನೆ ಅಂತ್ಯಗೊಂಡಿದೆ. ಸಂಜೆ ತಾಲೂಕು ಕಚೇರಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ ಕರವೇ ಕಾರ್ಯಕರ್ತರು, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇಂದು ಸಭೆ: ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರ ಆದೇಶ ಹಿನ್ನೆಲೆಯಲ್ಲಿ ಮುಂದಿನ ರೂಪುರೇಷೆಗಳ ಕುರಿತ ಚರ್ಚೆಗೆ ಶನಿವಾರ ಬೆಳಗ್ಗೆ 10ಕ್ಕೆ ಕನ್ನಡ ಜಾಗೃತ ಭವನದಲ್ಲಿ ಎಲ್ಲ ಸಂಘಟನೆಗಳ, ಜನಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿದೆ.