ಅಕ್ರಮ ಮರಳುಗಾರಿಕೆ: ಸೈನಿಕ ಮೌನ ಏಕೆ
ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜ.24
ಸ್ವಕ್ಷೇತ್ರ ಚನ್ನಪಟ್ಟಣದ ನದಿ ಪಾತ್ರ ಮತ್ತು ಕಂದಾಯ ಜಮೀನುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿಷಯದಲ್ಲಿ ಸೈನಿಕ ಸಿ.ಪಿ.ಯೋಗೇಶ್ವರ್ ಮೌನ ವಹಿಸಿರುವುದೇಕೆ?
ಹೀಗೊಂದು ಪ್ರಶ್ನೆ ಪರಿಸರವಾದಿಗಳು ಮತ್ತು ಮರಳುಗಾರಿಕೆ ವಿರೋಧಿ ಹೋರಾಟಗಾರರನ್ನು ಮಾತ್ರವಲ್ಲದೆ ಚನ್ನಪಟ್ಟಣ ಕ್ಷೇತ್ರದ ಜನತೆಯನ್ನೂ ಸಹಜವಾಗಿಯೇ ಕಾಡುತ್ತಿದೆ. ಇಷ್ಟಲ್ಲದೆ ಚರ್ಚೆಗೂ ಗ್ರಾಸವಾಗಿದೆ.
ಹಿಡಿತಕ್ಕೆ ಸಿಕ್ಕಿಲ್ಲವೇ: ಅಕ್ರಮ ಮರಳುಗಾರಿಕೆ ವಿರುದ್ಧ ಯೋಗೇಶ್ವರ್ ಕಳೆದೊಂದು ದಶಕದಿಂದ ಹೋರಾಟ ನಡೆಸಿಕೊಂಡೆ ಬಂದವರು. ಏಳು ವರ್ಷದ ಹಿಂದೆಯೆ ಅಧಿಕಾರಿಗಳ ಜತೆಗೂಡಿ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ, ಮಾಫಿಯಾವನ್ನು ಮಟ್ಟ ಹಾಕುವ ಸಾಹಸಕ್ಕೂ ಕೈ ಹಾಕಿದ್ದರು.
ಇಂತಹ ಯೋಗೇಶ್ವರ್ ಈಗೇಕೆ ಸುಮ್ಮನಿದ್ದಾರೆ. ಅವರೇನಾದರೂ ಮರಳು ಮಾಫಿಯಾದ ಕಪಿಮುಷ್ಠಿಗೆ ಸಿಲುಕಿದ್ದಾರೆಯೇ. ಚನ್ನಪಟ್ಟಣ ತಾಲೂಕು ಆಡಳಿತ ಅವರ ನಿಯಂತ್ರಣಕ್ಕೆ ಸಿಗದೆ ಹತಾಶೆಯಿಂದ ಅವರು ಮೌನಕ್ಕೆ ಮೊರೆ ಹೋಗಿರಬಹುದೇ ಎನ್ನುವ ಪ್ರಶ್ನೆಗಳು ಎದುರಾಗಿವೆ.
ತೊಡೆ ತಟ್ಟಿದ್ದರು: ಮರಳುಗಾರಿಕೆ ನಿಲ್ಲಿಸಿ, ಕಣ್ವ ಉಳಿಸಿ ಎನ್ನುವ ಘೋಷಣೆಯೊಂದಿಗೆ ಯೋಗೇಶ್ವರ್ ಹೋರಾಟ ನಡೆದಿತ್ತು. ತಮ್ಮ ವಿರುದ್ಧ ತಿರುಗಿ ಬಿದ್ದು, ಧಮಕಿ ಹಾಕಿದ್ದ ಮರಳು ದಂಧೆಕೋರರ ವಿರುದ್ಧ ಜಿದ್ದಾಜಿದ್ದಿಗೆ ಇಳಿದು ತೊಡೆ ತಟ್ಟಿದ್ದರು. ಅದೆಷ್ಟೇ ಪ್ರತಿರೋಧ ಎದುರಾದರೂ ಮರಳು ಮಾಫಿಯಾಕ್ಕೆ ಯೋಗೇಶ್ವರ್ ಮಣಿದಿರಲಿಲ್ಲ. ಆ ವೇಳೆ ಚನ್ನಪಟ್ಟಣದ ಪ್ರಗತಿಪರ ಸಂಘಟನೆಗಳು, ಹೋರಾಟಗಾರರು ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಕಾಳಜಿ ಮರೆದಿದ್ದರು.
ರಾಜಿ ಆಗಿರಲಿಲ್ಲ: ಯೋಗೇಶ್ವರ್ ಈ ವಿಷಯದಲ್ಲಿ ಅದೆಷ್ಟೆ ಜಿಜ್ಞಾಸೆಗಳಿದ್ದರೂ ಮರಳುಗಾರಿಕೆ ವಿರುದ್ಧದ ಹೋರಾಟದ ವಿಷಯದಲ್ಲಿ ವಿಪಕ್ಷ ಮುಖಂಡರು, ಸಂಘಟನೆಗಳು ಮತ್ತು ಕ್ಷೇತ್ರದ ಜನತೆ ಅವರನ್ನು ಮೆಚ್ಚಿರುವ ನಿದರ್ಶನಗಳಿವೆ. ಯೋಗೇಶ್ವರ್ ಎಂದಿಗೂ ಮರಳುಗಾರಿಕೆಗೆ ನೆರವಾದವರಲ್ಲ. ರಾಮನಗರ ಜಿಲ್ಲೆಯಲ್ಲಿ ಬೇರೆ ಯಾವೊಬ್ಬ ಶಾಸಕ, ಸಂಸದ ಮತ್ತು ಮುಖಂಡರು ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದವರಲ್ಲ. ಪರೋಕ್ಷವಾಗಿ ಮಾತ್ರವಲ್ಲದೆ ಪ್ರತ್ಯಕ್ಷವಾಗಿಯೇ ದಂಧೆಕೋರರಿಗೆ ಬೆಂಬಲ ವ್ಯಕ್ತಪಡಿಸಿರುವುದು ಜಗಜ್ಜಾಹೀರು.
ಕಾದಿದೆ ಆಪತ್ತು: ಕಣ್ವ ನದಿ ಪಾತ್ರದ ಹೇರಳ ಮರಳು ಸಂಪತ್ತು ಸಾಕಷ್ಟು ಲೂಟಿ ಆಗಿದೆ. ಆದರೆ, ಇದೀಗ ದಂಧೆಕೋರರು ಶಿಂಷಾ ನದಿ ಒಡಲು ಬಗೆದು ಮರಳು ದೋಚುತ್ತಿದ್ದಾರೆ. ಸತತ ಬರ, ಅಂತರ್ಜಲ ಕುಸಿತದಿಂದ ಕಂಗೆಟ್ಟಿರುವ ಚನ್ನಪಟ್ಟಣ ತಾಲೂಕಿಗೆ ಮರಳುಗಾರಿಕೆಯಿಂದ ಮತ್ತಷ್ಟು ಆಪತ್ತು ಕಾದಿದೆ. ಬರದಿಂದ ಬೆಂಗಾಡಾಗಿರುವ ಚನ್ನಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಮತ್ತು ಅಂತರ್ಜಲ ಮರುಪೂರಣಕ್ಕೆ ಶಿಂಷಾ ಮೂಲಕವೇ ಕಾವೇರಿ: ಕಣ್ವ ಸಂಗಮ ಯೋಜನೆ ಜಾರಿ ಆಗುತ್ತಿದೆ. ಭವಿಷ್ಯದಲ್ಲಿ ಈ ಯೋಜನೆ ಫಲಪ್ರದವಾಗಲು ಮರಳು ದಂಧೆಗೆ ಕಡಿವಾಣ ಅತ್ಯಗತ್ಯ.
ಭೇಟಿ ನೀಡಲಿಲ್ಲ: ಅಕ್ರಮ ಮರಳುಗಾರಿಕೆ ತಡೆಗೆ ಒತ್ತಾಯಿಸಿ ಚನ್ನಪಟ್ಟಣದಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚನ್ನಪಟ್ಟಣಕ್ಕೆ ಆಗಮಿಸಿದ್ದ ಯೋಗೇಶ್ವರ್ ಧರಣಿ ಸ್ಥಳಕ್ಕೆ ಭೇಟಿ ನೀಡಲಿಲ್ಲ.
ಅನಾರೋಗ್ಯಪೀಡಿತ ಸಿದ್ದರಾಮ ಹೆಗ್ಗಡೆಗೆ ಕಾಟಾಚಾರದ ಔಷಧೋಪಚಾರ ದೊರೆತಿದೆ. ಪ್ರಾಣ ಬೆದರಿಕೆ ಇರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ ನಂತರವೂ ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಕೆಲಸವಾಗಿಲ್ಲ. ಇದರ ಅರಿವಿದ್ದರೂ ಯೋಗೇಶ್ವರ್ ಭೇಟಿ ನೀಡದ ಬಗ್ಗೆ ಟೀಕಾರೋಪ ವ್ಯಕ್ತವಾಗಿದೆ.
ಮೌನ ಮುರಿಯಲಿ: ಅಕ್ರಮ ಮರಳುಗಾರಿಕೆಯಿಂದ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳ ಹೆಸರಲ್ಲೂ ಪಾಲು ನಿಗದಿಪಡಿಸಿ ಹಫ್ತಾ ವಸೂಲಾಗುತ್ತಿದೆ. ಅದು ತಲುಪುತ್ತಿದೆಯೋ ಅಥವಾ ಇಲ್ಲವೋ. ಒಟ್ಟಾರೆ, ಮಧ್ಯವರ್ತಿಗಳಿಂದ ಯೋಗೇಶ್ವರ್, ಜಿಲ್ಲಾಧಿಕಾರಿ ಹೆಸರಿಗೂ ಮಸಿ ಬಳಿಯಲಾಗುತ್ತಿದೆ.
ಬೆಂಬಲಿಗರಿಂದ ಆಧುನಿಕ ಭಗೀರಥ ಎಂದು ಕರೆಸಿಕೊಂಡಿರುವ ಶಾಸಕ ಯೋಗೇಶ್ವರ್ ಒಂದೆಡೆ ಜಾರಿಗೊಳಿಸುತ್ತಿರುವ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯ ಯಶಸ್ವಿ, ಮತ್ತೊಂದೆಡೆ ಕಳಂಕ ನಿವಾರಣೆಗೆ ಅನಿವಾರ್ಯವಾಗಿ ಮೌನ ಮುರಿಯಬೇಕಿದೆ.
ನಿಲುವು ಸ್ಪಷ್ಟಪಡಿಸಲಿ
ಈ ಹಿಂದೆ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸಿದ್ದ ಶಾಸಕ ಯೋಗೇಶ್ವರ್ ಈಗ ತುಟಿ ಬಿಚ್ಚಿಲ್ಲ. ಅವರು ತಕ್ಷಣವೇ ನಿಲುವು ಸ್ಪಷ್ಟಪಡಿಸಬೇಕು. ಅಕ್ರಮ ಮರಳು ದಂಧೆ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಬೇಕು.
ಟಿ ಸಿದ್ದರಾಮ ಹೆಗ್ಗಡೆ, ಹೋರಾಟಗಾರ.