ನಿತ್ಯಾನಂದನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರವೇ ರ್ಯಾಲಿ
ಬೆಂಗಳೂರು: ಕನ್ನಡ ನಾಡಿನ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಗೆ ಅಪಚಾರ ಮಾಡುತ್ತಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಮೇಲೆ ರಾಜ್ಯ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ರ್ಯಾಲಿ ನಡೆಸಿತು.
ಪುರಭವನದ ಮುಂಭಾಗದಿಂದ ಪ್ರಾರಂಭವಾದ ರ್ಯಾಲಿಯಲ್ಲಿ ನೂರಾರು ಜನರು ಭಾಗವಹಿಸಿ, ಕಾಲ್ನಡಿಗೆಯಲ್ಲಿ ಸ್ವಾತಂತ್ರ್ಯ ಉದ್ಯಾನವನ ತಲುಪಿದರು. ಬಂಧಿಸಿ, ಬಂಧಿಸಿ ನಿತ್ಯಾನಂದ ಬಂಧಿಸಿ ಎಂಬ ಕೂಗು ಕಾರ್ಯಕರ್ತರಿಂದ ಬಲವಾಗಿ ಕೇಳಿ ಬರುತ್ತಿತ್ತು.
ರ್ಯಾಲಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಪವಿತ್ರವಾದ ನೆಲ, ಧರ್ಮ, ಕರ್ಮ ಭೂಮಿ ಈ ಕರ್ನಾಟಕ. ಇಂತಹ ಸ್ಥಳದಲ್ಲಿ ನಿತ್ಯಾನಂದ ಮಠ ಸ್ಥಾಪಿಸಿಕೊಂಡು ಅನಾಚಾರಗಳಿಗೆ ದಾರಿ ತೋರಿಸುತ್ತಿದ್ದಾನೆ. ಜನರಿಗೆ ಮಂಕು ಬೂದಿ ಎರಚಿ ಆ ಮೂಲಕ ಮೋಸ ಮಾಡುತ್ತಿದ್ದಾನೆ. ಅಂತಹ ವ್ಯಕ್ತಿ ವಿರುದ್ಧ ಸರ್ಕಾರ ಕಾನೂನು ರೀತಿಯ ಕ್ರಮ ಜರುಗಿಸಬೇಕು. ಅಲ್ಲದೆ, ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮವನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಬೆಳವಣಿಗೆಗೆ ಕಳೆದ 13 ವರ್ಷಗಳಿಂದ ನಾಡಿನಾದ್ಯಂತ ಹೋರಾಟ ಮಾಡಿಕೊಂಡು ಬರುತ್ತಿರುವ ನಮ್ಮ ಸಂಘಟನೆ, ಇದುವರೆಗೂ ಧಾರ್ಮಿಕ ವಿಚಾರಗಳಿಂದ ದೂರವಿತ್ತು. ಆದರೆ, ಬಿಡದಿಯ ಬಳಿ ಇರುವ ನಿತ್ಯಾನಂದಸ್ವಾಮಿ ಎಂಬುವನು ಕಳೆದ ಒಂದೆರೆಡು ವರ್ಷಗಳಿಂದ ವಿವಿಧ ರೀತಿಯ ಗೊಂದಲ ಉಂಟುಮಾಡುತ್ತಾ ನಾಡಿನಲ್ಲಿರುವ ಉಳಿದ ಮಠಾಧೀಶರುಗಳಿಗೆ ಮತ್ತು ಧರ್ಮ ಗುರುಗಳಿಗೆ ಕೆಟ್ಟ ಹೆಸರು ತರುತ್ತಿದ್ದಾನೆ.
ಬಿಡದಿ ಆಶ್ರಮದ ಸುತ್ತಮುತ್ತ ಆಶಾಂತಿಯ ವಾತಾವರಣ ಉಂಟಾಗಿದೆ. ಮಠಗಳ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಗೊಂದಲ ಉಂಟುಮಾಡಿ ಸಮಾಜದಲ್ಲಿ ಉಂಟಾಗಿರುವ ಆಶಾಂತಿಗೆ ನಿತ್ಯಾನಂದ ಕಾರಣವಾಗಿರುವುದರಿಂದ ಅವರ ಮೇಲೆ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗೆ ಮನವಿ ಪತ್ರ ನೀಡಲಾಗುವುದು ಎಂದರು.