ಅಕ್ರಮ ಮರಳು ಗಣಿಗಾರಿಕೆ ವಿರೋಧಿಸಿ ಸಿದ್ದರಾಮ ಹೆಗಡೆ ಸತ್ಯಾಗ್ರಹ 6 ನೇ ದಿನಕ್ಕೆ
ಚನ್ನಪಟ್ಟಣ: ತಾಲೂಕಿನಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಮೇಲೆ ಮರಳು ಗಣಿ ವಿರೋಧಿ ಹೋರಾಟದ ಕರಿನೆರಳು ಕಾಡಿತ್ತು. ಸತತ 6ನೇ ದಿನವೂ ಮುಂದುವರೆದಿರುವ ಸಿದ್ದರಾಮ ಹೆಗಡೆ ಅಕ್ರಮ ಮರಳುಗಣಿಗಾರಿಕೆ ವಿರೋಧಿ ಸತ್ಯಾಗ್ರಹ ತಾಲೂಕು ಆಡಳಿತ ನಡೆಸುತ್ತಿರುವ ಸಂವಿಧಾನ ದಿನಾಚರಣೆಯನ್ನು ಅಣಕಿಸುತ್ತಿತ್ತು.
ಗಣರಾಜ್ಯೋತ್ಸವ ದಿನದಂದು ಚಳವಳಿ ಮುಂದುವರೆಸಿದ ಸಿದ್ದರಾಮ ಹೆಗಡೆ ಈ ದೇಶದ ಸಂವಿಧಾನವನ್ನು ಪಾಲಿಸಲು ನೈತಿಕತೆ ಇಲ್ಲದ ತಾಲೂಕು ಆಡಳಿತ ಗಣರಾಜ್ಯೋತ್ಸವ ಆಚರಿಸಲು ಯಾವ ನೈತಿಕತೆಯಿಂದ ಮುಂದಾಗಿದ್ದಾರೆ ಎಂದು ಪ್ರಶ್ನಿಸಿದರು.
ಈ ದೇಶದ ಭೌಗೋಳಿಕ ಸಂಪತ್ತು ಈ ದೇಶದ ಆಸ್ತಿ ಎಂದು ಸ್ಪಷ್ಟಪಡಿಸಿರುವ ಸಂವಿಧಾನ ಇದನ್ನು ಕಾಪಾಡುವ ಹೊಣೆ ಸರ್ಕಾರಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ. ಆದರೆ ನಮ್ಮ ತಾಲೂಕಿನಲ್ಲಿ ಕಳೆದ 14 ವರ್ಷದಿಂದ ಭೌಗೋಳಿಕ ಸಂಪತ್ತು ನಿರಂತರವಾಗಿ ಲೂಟಿಯಾಗಿದ್ದು ಇದನ್ನು ತಡೆಯಲಾಗದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೆ ಭ್ರಷ್ಟರು ಮತ್ತು ಲೂಟಿ ಕೋರರ ಹಿತ ಕಾಯಲು ಮುಂದಾಗಿರುವ ಜಿಲ್ಲಾಡಳಿತಕ್ಕೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ನೈತಿಕತೆ ಇದೆಯೇ ಎಂದರು.
ಎಚ್.ಎಸ್. ದೊರೆಸ್ವಾಮಿ ಬೆಂಬಲ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ದರಾಮ ಹೆಗಡೆ ತಿಳಿಸಿದರು. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಹಮ್ಮಿಕೊಂಡಿರುವ ಹೋರಾಟದ ಬಗ್ಗೆ ದೂರವಾಣಿ ಮೂಲಕ ನನಗೆ ಮೆಚ್ಚುಗೆ ಸೂಚಿಸಿರುವ ಅವರು ಇನ್ನೆರಡು ದಿನಗಳಲ್ಲಿ ಚಳವಳಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ತಾಲೂಕು ಕಚೇರಿಗೆ ಬೀಗ: ಇನ್ನೊಂದು ದಿನದಲ್ಲಿ ಸತ್ಯಾಗ್ರಹಕ್ಕೆ ನ್ಯಾಯ ದೊರಕಿಸಿ ಕೊಡದಿದ್ದರೆ ತಾಲೂಕು ಕಚೇರಿಗೆ ಬೀಗ ಹಾಕುವ ಮೂಲಕ ಆಡಳಿತ ವ್ಯವಸ್ಥೆಯ ವೈಖರಿಯನ್ನು ಖಂಡಿಸುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ಮಲ್ಲಯ್ಯ ತಿಳಿಸಿದರು. ರೈತ ಸಂಘದ ಹೋರಾಟ ಅಚಲವಾಗಿದ್ದು ಅಧಿಕಾರಿಗಳು ಲಾಬಿಗಳಿಗೆ ಮಣಿದು ಕಾನೂನು ಪಾಲನೆ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆಯ ಉದಾಸೀನತೆಯನ್ನು ನಾವು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಾಚಿಕೆ ಗೇಡಿನ ಸಂಗತಿ: ಅಕ್ರಮ ಗಣಿಗಾರಿಕೆಯ ವಿರುದ್ಧ ನಡೆಯುತ್ತಿರುವ ಚಳವಳಿಗೆ ನ್ಯಾಯ ಕೊಡಿಸದೆ ಗಣರಾಜ್ಯೋತ್ಸವ ನಡೆಸುತ್ತಿರುವ ತಾಲೂಕು ಆಡಳಿತದ ಕ್ರಮ ನಾಚಿಕೆಗೇಡಿನ ಸಂಗತಿಯಾಗಿದ್ದು , ಒಬ್ಬ ಚಳವಳಿಗಾರರನನ್ನು ಗೌರವಯುತವಾಗಿ ನಡೆಸಿಕೊಳ್ಳದ ತಾಲೂಕು ಆಡಳಿತಕ್ಕೆ ಸದ್ಯದಲ್ಲೇ ಜನಪರ ಸಂಘಟನೆಗಳು ಬಿಸಿ ಮುಟ್ಟಿಸಲಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಸ್ವಾಮಿ ಎಚ್ಚರಿಸಿದ್ದಾರೆ.