ಎಸಿ ಕಚೇರಿ ಕಾರ್ಯಾರಂಭ: ಸರ್ಕಾರದ ಸೂಚನೆ ಆಧರಿಸಿ ಕ್ರಮ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಅಧಿಕೃತವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಕಾರ್ಯಾರಂಭ ಮಾಡಲು ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ಸರ್ಕಾರದ ಸೂಚನೆಗಳನ್ನು ಆಧರಿಸಿ ಕಚೇರಿ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗುವುದು ಎಂದು ಉಪವಿಭಾಗಾಧಿಕಾರಿ ಸಿ.ಮಂಜುನಾಥ್ ಹೇಳಿದರು.
ಗಣರಾಜ್ಯೋತ್ಸವ ಆಶಯ ಭಾಷಣ ಮಾಡಿದ ಅವರು, ಇದು ಇಲ್ಲಿನ ಜನರ ಹೋರಾಟಕ್ಕೆ ಸಂದ ಫಲ. 5 ದಶಕಗಳ ಹಿಂದೆಯೇ ಉಪವಿಭಾಗವಾಗಿ ಅಸ್ತಿತ್ವ ಪಡೆದಿರುವ ದೊಡ್ಡಬಳ್ಳಾಪುರ ತನ್ನ ವ್ಯಾಪ್ತಿಯಲ್ಲಿ ಅನೇಕ ಮಹತ್ವದ ಘಟನಾವಳಿಗಳನ್ನು ಹೊಂದಿದೆ. ನೇಕಾರಿಕೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಕವಿ-ಸಾಹಿತಿಗಳು ಈ ನೆಲದ ಪ್ರತಿಷ್ಠೆ. ಸರ್ಕಾರದ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಜನರ ಸಹಕಾರ ಅತ್ಯಗತ್ಯ. ಯೋಜನೆಗಳ ಯಶಸ್ಸು ಅಧಿಕಾರಿ-ಜನಪ್ರತಿನಿಧಿ ಮತ್ತು ಜನರ ನಡುವಿನ ಪರಸ್ಪರ ಸಹಕಾರ ಮತ್ತು ಹೊಣೆಯಾಧಾರಿತ ಸಂಬಂಧದಿಂದ ವೃದ್ಧಿಸುತ್ತದೆ. ಈ ಹಂತದಲ್ಲಿ ದೊಡ್ಡಬಳ್ಳಾಪುರದ ಸರ್ವತೋಮುಖ ಪ್ರಗತಿಯಾಗಲಿ. ಗಣರಾಜ್ಯೋತ್ಸವ ದಿನದಂದೇ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿರುವುದು ಗಣನೀಯ ಅಂಶ ಎಂದರು.