ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನನ್ನನ್ನು ಹಣಿಯಲು ಹೊರಟವರಿಗೆ ತೀವ್ರ ನಿರಾಸೆ

Rashmi Kasaragodu
Updated On : 27 Jan 2014, 1:46 am

ಕ.ಪ್ರ.ವಾರ್ತೆ    ರಾಮನಗರ    ಜ.26
ಕಳಂಕದ ಹೆಸರಿನಲ್ಲಿ ಕೆಲ ಸ್ವಪಕ್ಷೀಯರು ಸೇರಿದಂತೆ ವಿರೋಧಿಗಳು ನನ್ನನ್ನು ರಾಜಕೀಯವಾಗಿ ಹಣಿಯಲು ಹೊರಟಿದ್ದರು. ಈಗ ಅವರೆಲ್ಲರಿಗೂ ಭ್ರಮನಿರಸನವಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಸಮಿಟಿಯು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅದೇ ಕಳಂಕದ ಕಾರಣಕ್ಕೆ ನಾನು ಇಷ್ಟು ದಿನ ಸಂಪುಟದಿಂದ ಹೊರಗುಳಿದಿದ್ದೆ. ಹೈಕಾಂಡ್ಗೆ ಈಗ ವಸ್ತುಸ್ಥಿತಿ ಮನವರಿಕೆಯಗಿದ್ದು, ನನಗೆ ಸೂಕ್ತ ಸ್ಥಾನ ಮಾನ ಕಲ್ಪಿಸಿದೆ. ಹೀಗಾಗಿ ವಿರೋಧಿಗಳ ಆಟ ನಡೆಯುವುದಿಲ್ಲ ಎಂದರು.
ನನಗೆ ಜನಸೇವೆ ಮುಖ್ಯವೇ ಹೊರತು ಅಧಿಕಾರ ಮುಖ್ಯವಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದೀರಿ. ಸಚಿವ ಸ್ಥಾನದ ಜತೆಗೆ ಜವಾಬ್ದಾರಿ ನೀಡಿದ್ದೀರಿ, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಿಮ್ಮ ಜತೆ ಇದ್ದುಕೊಂಡು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಜನತೆಗೆ ಆಶ್ವಾಸನೆ ನೀಡಿದರು.
ನನ್ನ ನಿರ್ಧಾರ ಅಲ್ಲ: ನನ್ನ ಸಹೋದರ ಡಿ.ಕೆ.ಸುರೇಶ್ ಅವರನ್ನು ಪಕ್ಷ ಹಾಗೂ ಕಾರ್ಯಕರ್ತರ ಒತ್ತಾಸೆಯಂತೆ  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತೇ ಹೊರತು ನನ್ನ ನಿರ್ಧಾರ ಅಲ್ಲ. ಅವರನ್ನು 1.37 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಅವರು ಕಳೆದ 4 ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ನಿಮ್ಮ ಸೇವೆ ಮಾಡುತ್ತಿದ್ದಾರೆ. ಈ ಹಿಂದೆ ಸಂಸದರಾಗಿದ್ದವರಾರೂ ಮಾಡದ ಸೇವೆಯನ್ನು ಸುರೇಶ್ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಕುಡಿಯುವ ನೀರಿಗಾಗಿ ಜನರು ಅನುಭವಿಸುತ್ತಿದ್ದ ಸಂಕಷ್ಟವನ್ನು ನಿವಾರಿಸಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ವಿರೋಧಿಗಳ ಟೀಕೆಯ ನಡುವೆಯೂ ಕಾಮಗಾರಿಯನ್ನು ಮುಂದುವರಿಸಿ, ಯಶಸ್ವಿಯೂ ಆಯಿತು. ಕನಕಪುರದಿಂದ ಪ್ರಾರಂಭವಾದ ಯೋಜನೆ ಈಗ ದೇಶಾದ್ಯಂತ ಚಾಲ್ತಿಯಲ್ಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರು.1700 ಕೋಟಿ ಮೀಸಲಿಟ್ಟಿದೆ ಎಂದರು.
ರಾಜಕೀಯ ಬೆರೆಸೋಲ್ಲ:  ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ರಾಮನಗರದಲ್ಲಿರುವ ವಸತಿ ರಹಿತರಿಗೆ 2 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಈ ಮನೆಗಳನ್ನು ಕ್ಷೇತ್ರದ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಫಲಾನುಭವಿಗಳಿಗೆ ವಿತರಿಸಲಾಗುವುದು. ಯಾರ ವಿರುದ್ಧವೂ ಸಂಘರ್ಷಕ್ಕೆ ಇಳಿಯುವ ಇಚ್ಛೆ ನನಗಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸುವುದಿಲ್ಲ ಎಂದರು.
ಮಣ್ಣಿನ ಮಕ್ಕಳು ಏನು ಮಾಡುತ್ತಿದ್ದಾರೆ: ರೈತನ ಮಗ, ಮಣ್ಣಿನ ಮಗ ಎನ್ನುವ ಸರ್ಟಿಫಿಕೆಟ್ ನನಗೆ ನಗೆ ಬೇಡ. ರೈತರ, ನೊಂದವರ ಸೇವೆ ಮಾಡುವುದು ಮುಖ್ಯ. ಈ ಕೆಲಸವನ್ನು ನಾನು ಮತ್ತು ನನ್ನ ಸಹೋದರ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಮಣ್ಣಿನ ಮಕ್ಕಳು ಎನಿಸಿಕೊಂಡವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.  ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಯಾರನ್ನೂ ಬೇಕಾದರೂ ಅಭ್ಯರ್ಥಿಯನ್ನಾಗಿಸಲಿ. ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಈಗಾಗಲೇ ಚುನಾವಣೆಗೆ ಸಿದ್ಧವಾಗಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಜೆಡಿಎಸ್ ಶಕ್ತಿ ಗೊತ್ತಿದೆ: ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ನಾನು ಗೆದ್ದಿದ್ದೇನೆ. ಎಚ್.ಡಿ.ದೇವೇಗೌಡರ ವಿರುದ್ಧ ಒಬ್ಬ ಮಹಿಳೆಯನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದೇನೆ. ಕಳೆದ ಬಾರಿ ಕುಮಾರಸ್ವಾಮಿ ಪತ್ನಿ ವಿರುದ್ಧ ಡಿ.ಕೆ.ಸುರೇಶ್ ಗೆಲವು ಸಾಧಿಸಿದ್ದಾರೆ. ಇದರಿಂದ ಜೆಡಿಎಸ್ನ ಶಕ್ತಿ ಏನೆಂಬುದನ್ನು ನೀವೇ ಅರ್ಥೈಸಿಕೊಳ್ಳಿ ಎಂದರು.
ಅಭಿವೃದ್ಧಿಗೆ ಹಿನ್ನೆಡೆ: ಸತತವಾಗಿ ಕಾಡುತ್ತಿರುವ ಬರದಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಎಲ್ಲೆಲ್ಲಿ ನೀರು ಲಭ್ಯವಿದೆಯೋ ಅಲ್ಲಿಂದ ನೀರನ್ನು ತಂದು ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಶಿಂಷಾ ನದಿಯಿಂದ ಕನಕಪುರ ತಾಲೂಕಿನ ಸಾತನೂರು ಮತ್ತು ರಾಮನಗರ ತಾಲೂಕಿನ ಕೈಲಾಂಚ ಹೋಬಳಿಗಳ ಕೆರೆಗಳನ್ನು ತುಂಬಿಸಲು ಸಮೀಕ್ಷಾ ವರದಿ ಸಿದ್ಧವಾಗಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ರೀರಂಗ ಯೋಜನೆಗೆ ಚಾಲನೆ ನೀಡಲಾಗಿದೆ. ಎತ್ತಿನ ಹೊಳೆ ಯೋಜನೆಯಿಂದ 2 ಟಿಎಂಸಿ ನೀರನ್ನು ಜಿಲ್ಲೆಗೆ ತರಲಾಗುವುದು. ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಜಿಯಾ ಉಲ್ಲಾ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರವಿ, ಬಮೂಲ್ ನಿರ್ದೇಶಕ ಪಿ.ನಾಗರಾಜು, ಮುಖಂಡರಾದ ಮರಿದೇವರು, ಎ.ಮಂಜುನಾಥ್, ರಘುನಂದನ್ ರಾಮಣ್ಣ, ಎಚ್.ಎಂ. ಕೃಷ್ಣಮೂರ್ತಿ, ಕೆ.ರಮೇಶ್, ಕೆ.ಶೇಷಾದ್ರಿ, ಜಿ.ಪಂ. ಸದಸ್ಯ ಎಕ್ಬಾಲ್ ಹುಸೇನ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಐಜೂರು ವೃತ್ತದಿಂದ ಪದವಿ ಪೂರ್ವ ಕಾಲೇಜು ಮೈದಾನದವರೆಗೆ ಸಚಿವ ಶಿವಕುಮಾರ್ ಅವರನ್ನು ವಿವಿಧ ಸಾಂಸ್ಕೃತಿ ಕಲಾ ತಂಡಗಳೊಂದಿಗೆ ಮೆರವಣಿಗೆಯ ಮೂಲಕ  ಕರೆತರಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement