ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಎತ್ತಿನಹೊಳೆ

Rashmi Kasaragodu
Updated On : 27 Jan 2014, 1:48 am


ಚನ್ನಪಟ್ಟಣ:  ಈ ಜಿಲ್ಲೆಯ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಎತ್ತಿನಹೊಳೆ, ಹೇಮಾವತಿ ಯೋಜನೆಗಳನ್ನು ಸಾಕಾರ ಗೊಳಿಸಲು ನಮ್ಮ ಸರ್ಕಾರ ಮತ್ತು ನಾನು ಬದ್ಧವಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಲ್ಲಿನ ಕೆಂಗಲ್ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಕೆಂಗಲ್ ಬಳಿಯ ವಂದಾರಗುಪ್ಪೆ ಕ್ಷೇತ್ರದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ -2014 ಕ್ಕೆ ಚಾಲನೆ ನೀಡಿ ಮಾತನಾಡಿ, ಈ ಜಿಲ್ಲೆಯಿಂದ 2 ಲಕ್ಷಕ್ಕೂ ಅಧಿಕ ಜನ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸಿ ಅವರಿಗೆ ಸ್ಥಳೀಯವಾಗೇ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಬೇಕಾದ್ದು ನಮ್ಮ ಜವಾಬ್ದಾರಿ ಎಂದರು.
ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಅನುಷ್ಠಾನ ಗೊಳಿಸುತ್ತಿರುವ ಕಾರ್ಯಕ್ರಮಗಳನ್ನು ಜನಸಂಖ್ಯೆ ಆಧಾರದ ಮೇಲೆಯ ರೂಪಿಸುತ್ತಿರುವುದರಿಂದ ವಲಸೆ ಪ್ರಕ್ರಿಯೆಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಯಾರು ಎಲ್ಲಿಗೇ ಹೋದರು ನಿಮ್ಮ ಊರಿನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿರುವಂತೆ ನೋಡಿ ಕೊಳ್ಳಿ, ನಿಮ್ಮ ಊರಿನಲ್ಲೇ ನಿಮ್ಮ ದಾಖಲಾತಿಗಳಿರಲಿ ಎಂದು ಸೂಚಿಸಿದರು.
ರೈತರು ಕೃಷಿ ಕ್ಷೇತ್ರದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿಗೆ ಒಳಗಾಗಿದ್ದು ಪಂಪ್ಸೆಟ್ ಸಮಸ್ಯೆ ಬೆಲೆ ಇಳಿಕೆ, ವಿದ್ಯುತ್ ಹೀಗೆ ಸಮಸ್ಯೆಗಳಿಂದ ಹೊರಬರಲು ವಾಣಿಜ್ಯ ಬೆಳೆಗಳಿಗೂ ಪ್ರಾಮುಖ್ಯತೆ ನೀಡುವ ಪ್ರಯತ್ನವಾಗಬೇಕಿದೆ. ಗುಲಾಬಿ ಮತ್ತಿತರ ಪುಷ್ಪಗಳನ್ನು ಜಿಲ್ಲೆಯಿಂದ ಹೊರದೇಶಗಳಿಗೂ ರವಾನಿಸಲಾಗುತ್ತಿದೆ. ದ್ರಾಕ್ಷಿ ದಾಳಿಂಬೆ ಮುಂತಾದ ಆದಾಯಕರ ಬೆಳೆಗಳನ್ನು ಜಿಲ್ಲೆಗೆ ವ್ಯಾಪಕವಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ರೈತರ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತಿದ್ದು, ರೇಷ್ಮೆ ಬೆಳೆ ಇಳಿದಾಗ ರೈತ ನಿಯೋಗವನ್ನು ಕೇಂದ್ರ ಸಚಿವರುಗಳ ಭೇಟಿಗೆ ಕರೆದುಕೊಂಡು ಹೋಗಿ ಇದ್ದಂತಹ ಸಮಸ್ಯೆಗಳನ್ನು ಹೋಗಲಾಡಿಸಿ ಬೆಲೆ ಹೆಚ್ಚಿಸಲು ಸ್ಪಂದಿಸಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನರೇಗಾ ಯೋಜನೆಯಡಿ ಅವರ ಜಮೀನಿನಲ್ಲೇ 50 ಸಾವಿರ ರು.ಗಳ ವರೆಗಿನ ಕಾರ್ಯಕ್ರಮ ರೂಪಿಸಲು ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದರು.
ಸಂಸದ ಡಿ.ಕೆ. ಸುರೇಶ್  ಮಾತನಾಡಿ ಬೆಳೆದ ಬೆಳೆಗೆ ಬೆಲೆ ಇಲ್ಲ. ಮಳೆ ಇಲ್ಲ. ಕೊಳವೆ ಬಾವಿಗಳು ಒಣಗಿ ವಿದ್ಯುತ್ ಕೊರತೆ ನಡುವೆಯೂ ಬೆಳೆದ ಬೆಳೆಗೆ ಬೆಲೆ ಇಲ್ಲವಾದಾಗ ಆತಂಕ ಹೊಂದುವನು. ಪ್ರತಿಯೊಂದು ಸಂದರ್ಭದಲ್ಲಿಯೂ ನನ್ನು ಆಲೋಚನೆಯು ರೈತರ ಬದುಕನ್ನು ಹಸನುಗೊಳಿಸುವುದಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ, ಅಧಿಕಾರಿಗಳ ಮೇಲೆ ನಿರಂತರ ಒತ್ತಡ ಹೇರುತ್ತಿರುವೆ ಎಂದರು.
 ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಮೂಲಕ ಎರಡು ಟಿಎಂಸಿ ನೀರು ಒದಗಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದು 15ದಿನಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ, ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್,  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಎಸ್.ಬಿ. ಗೌರಮ್ಮ, ರಾಜ್ಯ ದ್ರಾಕ್ಷರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ. ಕಣಷ್ಣ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಲತಾವೆಂಕಟಪತಿ, ಜಿ.ಪಂ. ವಿರೋಧ ಪಕ್ಷದನಾಯಕ ಇಕ್ಬಾಲ್ ಹುಸೇನ್, ಉಪಸ್ಥಿತರಿದ್ದರು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಎಚ್.ಎನ್. ಹೇಮಾ ಸ್ವಾಗತಿಸಿದರೆ, ಜೆ. ನವೀನ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement