ಅಕ್ರಮ ಮರಳು ಗಣಿಗಾರಿಕೆ ಹೋರಾಟ ತೀವ್ರ ಸ್ವರೂಪ ಪಡೆವ ಲಕ್ಷಣ
ಚನ್ನಪಟ್ಟಣ: ತಾಲೂಕಿನಲ್ಲಿ ಕಳೆದ 8 ದಿನಗಳಿಂದ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹೋರಾಟ ತೀವ್ರ ಸ್ವರೂಪ ಪಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಕಳೆದ 8 ದಿನಗಳಿಂದ ತಾ.ಪಂ ಮಾಜಿ ಅಧ್ಯಕ್ಷ ಸಿದ್ದರಾಮ ಹೆಗಡೆ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಹಿರಿಯ ಸ್ವಾತಂತ್ರ್ಯ ಸೇನಾನಿ ಎಚ್.ಆರ್.ದೊರೆಸ್ವಾಮಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಇನ್ನೆರಡು ದಿನಗಳಲ್ಲಿ ಖುದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿರುವುದು ಹೋರಾಟದ ಕೆಚ್ಚು ಹೆಚ್ಚಿಸಿದೆ.
ತಾಲೂಕಿನ ಕಣ್ವ ಮತ್ತು ಶಿಂಷಾ ನದಿ ಪಾತ್ರದಲ್ಲಿ ಸರ್ಕಾರದ ನಿಷೇಧದ ನಡುವೆಯೂ ಅವ್ಯಾಹತವಾಗಿ ನಡೆದಿರುವ ಮರಳು ಗಣಿಗಾರಿಕೆಯಿಂದಾಗಿ ತಾಲೂಕಿನ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳನ್ನು ಹಿರಿಯ ಮುಖಂಡರು ದೊರೆಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲಗೊಂಡಿದ್ದು ಈ ಬಗ್ಗೆ ಸ್ಪಷ್ಟ ಅರಿವು ಪಡೆದಿರುವ ಅವರು ಚಳವಳಿಗೆ ಧುಮುಕಲು ಇಚ್ಛಿಸಿದ್ದಾರೆ.
ಮತ್ತಷ್ಟು ಪ್ರಮುಖರ ಬೆಂಬಲ: ದೊರೆಸ್ವಾಮಿ ಜತೆಗೆ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಗಡೆ, ಸಮಾಜಪರಿವರ್ತನಾ ಸಮಾಜದ ಹಿರೇಮಠ್ ಸೇರಿದಂತೆ ರಾಜ್ಯಮಟ್ಟದ ಕೆಲ ಪರಿಸರವಾದಿಗಳನ್ನು ಸತ್ಯಾಗ್ರಹಕ್ಕೆ ಕರೆತಂದು ಚಳವಳಿಯನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವ ಪ್ರಯತ್ನಗಳು ಆರಂಭ ಗೊಂಡಿವೆ.
ಮೇಧಾಪಾಟ್ಕರ್ ಕರೆತರಲು ಚಿಂತನೆ: ನರ್ಮದಾ ಬಚಾವೋ ಆಂದೋಲನದ ನೇತಾರರಾದ ಮೇಧಾ ಪಾಟ್ಕರ್ ಕರೆತರಲು ಚಳವಳಿಯ ಪರವಾಗಿರುವ ಕೆಲ ಸಂಘಟನೆಗಳು ಕಾರ್ಯಪ್ರವಣತ್ತವಾಗಿದ್ದು, ಈ ಸಂಬಂಧ ರಾಜ್ಯಮಟ್ಟದ ಪರಿಸರವಾದಿಗಳೊಂದಿಗೆ ಚರ್ಚೆನಡೆಸಿದ್ದಾರೆ.
ತಾಲೂಕು ಕಚೇರಿಗೆ ಬೀಗ: ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ನಡೆಯುತ್ತಿರುವ ಸತ್ಯಾಗ್ರಹದ ಬಗ್ಗೆ ಅನಾದರಣೆ ತೋರುತ್ತಿರುವ ತಾಲೂಕು ಮತ್ತು ಜಿಲ್ಲಾಡಳಿತ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಕಚೇರಿಗೆ ಮಂಗಳವಾದ ಬೀಗ ಜಡಿಯಲು ತೀರ್ಮಾನಿಸಿದೆ.
ಇದರೊಂದಿಗೆ ಅಕ್ರಮ ಮರಳು ಗಣಿಗಾರಿಕೆ ವಿರೋಧಿ ಚಳವಳಿ ತೀವ್ರ ಸ್ವರೂಪ ಪಡೆಯಲಿದ್ದು, ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ರಾಮು ನೇತೃತ್ವದಲ್ಲಿ ಅಸಂಖ್ಯಾತ ರೈತರು ತಾಲೂಕು ಕಚೇರಿಗೆ ಬೀಗಜಡಿಯುವ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ತಿಳಿಸಿದ್ದಾರೆ.
ಜಿಲ್ಲಾಮಟ್ಟಕ್ಕೆ ವಿಸ್ತರಣೆ: ತಾಲೂಕಿನಲ್ಲಿ ಆರಂಭಗೊಂಡಿರುವ ಅಕ್ರಮ ಮರಳು ಗಣಿಗಾರಿಕೆ ವಿರೋಧಿ ಆಂದೋಲನ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಿದ್ದು. ಮಹತ್ಮಾ ಗಾಂಧಿ ಹುತಾತ್ಮ ದಿನದ ಅಂಗವಾಗಿ ಜ.30 ರಂದು ರಾಜ್ಯ ರೈತಸಂಘ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಹಾಕಿ ಸತ್ಯಾಗ್ರಹಕ್ಕೆ ನ್ಯಾಯ ದೊರಕಿಸಿ ಕೊಡಿವಂತೆ ಆಗ್ರಹಿಸಲಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮಣಸ್ವಾಮಿ ತಿಳಿಸಿದ್ದಾರೆ. ರೈತಸಂಘದ ಈ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಭೂತಾಯಿ ಹೋರಾಟಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಪ್ರಾಂತ ರೈತ ಸಂಘದ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಿದ್ದರಾಮಹೆಗಡೆಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲಿರುವುದಾಗಿ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಘೋಷಿಸಿದ್ದು, ದಿನದಿಂದ ದಿನಕ್ಕೆ ಹೆಗಡೆ ಸತ್ಯಾಗ್ರಹ ತೀವ್ರ ಸ್ವರೂಪ ಪಡೆಯಲಾರಂಭಿಸಿದೆ.
ಶಿಸ್ತು ಕ್ರಮ: ಅಕ್ರಮ ಮರಳುಗಣಿಗಾರಿಕೆ ವಿರೋಧಿ ಹೋರಾಟ ತೀವ್ರಗೊಳ್ಳುತ್ತಿರುವುದರಿಂದ ಎದುರಾಗಿರುವ ಮುಜುಗರ ತಪ್ಪಿಸಿಕೊಳ್ಳಲು ತಾಲೂಕು ಮಟ್ಟದ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿರುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಪೊಲೀಸ್ ಹಾಗೂ ಇತರ ಇಲಾಖಾ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತನಗೆ ಎದುರಾಗಿರುವ ಮುಜುಗರದಿಂದ ಪಾರಾಗಲು ಹಿರಿಯ ಅಧಿಕಾರಿಗಳು ಮುಂದಾಗಿರುವುದಾಗಿ ತಿಳಿದು ಬಂದಿದೆ.