ಇಂದು ದೇವನಹಳ್ಳಿ ಬಂದ್, ಧರಣಿ 8ನೇ ದಿನಕ್ಕೆ
ದೇವನಹಳ್ಳಿ: ದೇವನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಸಂಘಟನೆಯ ವಿವಿಧ ಪಕ್ಷಗಳ ಮುಖಂಡರು ಇಲ್ಲಿನ ಮಿನಿ ವಿಧಾನಸೌಧದ ಮುಂಭಾದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿ ಎಂಟನೆಯ ದಿಕ್ಕೆ ಕಾಲಿಟ್ಟಿದ್ದು ಪ್ರತಿ ದಿನ ವಿವಿಧ ಸಂಘಸಂಸ್ಥೆಗಳ ಮುಖಂಡರು ಧರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಸೋಮವಾರ ದೇವನಹಳ್ಳಿ ಪುರಸಭೆಯ ಎಲ್ಲ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು. ಹೋರಾಟ ಸಮಿತಿಯ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ ಮಾತನಾಡಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಮಂಗಳವಾರ ದೇವನಹಳ್ಳಿ ಬಂದ್ಗೆ ಕರೆನೀಡಿದ್ದು ಎಲ್ಲ ಅಂಗಡಿ ವರ್ತಕರು ಮತ್ತು ಸಂಘ ಸಂಸ್ಥೆಗಳು ಅಲ್ಲದೆ ತಾಲೂಕು ವಕೀಲರ ಸಂಘ ಸಹ ಸಹಕಾರ ನೀಡಲಿವೆ ಎಂದರು.
ರೇಷ್ಮೆ ಬೆಳೆ ಕ್ಷೇತ್ರೋತ್ಸವ
ಸೂಲಿಬೆಲೆ: ಸಮೀಪದ ಬೂದಿಗೆರೆ ಹೋಬಳಿ ವ್ಯಾಪ್ತಿಯ ಬಂಡಿಕೋಡಿಗೇನಹಳ್ಳಿ ಗ್ರಾಪಂಗೆ ಸೇರಿದ ಹುಣಸೂರಿನಲ್ಲಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ನಿವೃತ್ತ ವಿಜ್ಞಾನಿ ಆನಂತ್ರಾಮ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ರೈತರು ಹೆಚ್ಚಾಗಿ ರೇಷ್ಮೆ ಹಿಪ್ಪುನೇರಳೆ ಬೆಳೆಯನ್ನು ನಂಬಿಕೊಂಡಿದ್ದು, ಆರ್ಥಿಕ ಪ್ರಗತಿಗೆ ಉತ್ತಮ ಕೃಷಿಯಾಗಿದೆ. ಹಿಪ್ಪುನೇರಳೆ ಗಿಡ, ಬೆಳವಣಿಗೆ, ರೇಷ್ಮೆ ಹುಳು ಸಾಕಣೆ, ರೇಷ್ಮೆ ಬಿತ್ತನೆ ಇತ್ಯಾದಿ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ನೀಡಿ ಬೆಳೆಯ ಉನ್ನತಿಗೆ ರೈತರು ಹೆಚ್ಚು ತಾಂತ್ರಿಕ ಪದ್ಧತಿಗಳನ್ನು ಆಳವಡಿಸಿಕೊಳ್ಳುವಂತೆ ಕರೆಯಿತ್ತರು.
ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಬೈರಾರೆಡ್ಡಿ, ವಿಸ್ತಾರಣಾಧಿಕಾರಿ ಗಿರಿಜಾಂಬ, ಗ್ರಾಪಂ ಸದಸ್ಯ ಶೀಲಾ ಚೌಡಪ್ಪ, ಸುಬ್ರಹ್ಮಣ್ಯ, ಜಬೀರ್ಪಾಷ, ನಾಗರಾಜ್, ಆದರ್ಶ ರೈತ ಗುಂಪು ಅಧ್ಯಕ್ಷ ಜಗನಾಥ್ ಸೇರಿದಂತೆ ಆನೇಕ ರೈತ ಮುಖಂಡರು ಭಾಗವಹಿಸಿದ್ದರು.