ಉಪ ಚುನಾವಣೆ ಸೋಲಿನಿಂದ ಹತಾಶೆ ಆಗಿಲ್ಲ
ರಾಮನಗರ: ಮಾಜಿ ಪ್ರಧಾನ ಮಂತ್ರಿ, ಮಾಜಿ ಮುಖ್ಯಮಂತ್ರಿಗಳನ್ನು ಹೊಂದಿರುವ ಜೆಡಿಎಸ್ ಕೈಕಟ್ಟಿ ಕುಳಿತಿಲ್ಲ. ಕಳೆದ ಉಪ ಚುನಾವಣೆ ಸೋಲಿನಿಂದ ಹತಾಶೆಯೂ ಆಗಿಲ್ಲ. ಮಾಸಾಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಆಖೈರುಗೊಳ್ಳಲಿದ್ದು, ಅಖಾಡಕ್ಕೆ ಸಜ್ಜಾಗಲಿದ್ದೇವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ರಾಜು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಜನತೆ ನೀಡಿರುವ ತೀರ್ಪಿಗೆ ತಲೆಬಾಗಿದ್ದೇವೆ. ಕಾಂಗ್ರೆಸಿಗರು ಭಾವಿಸಿರುವಂತೆ ನಾವೇನೂ ಕೈಕಟ್ಟಿ ಕುಳಿತಿಲ್ಲ. ಮುಂದಿನ ಹೋರಾಟಕ್ಕೆ ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನು ನಾಲ್ಕೂವರೆ ವರ್ಷ ಜೆಡಿಎಸ್ ಪಕ್ಷದವರಿಗೆ ಕೆಲಸವಿಲ್ಲ. ಆ ಪಕ್ಷದವರಿಗೆ ಕಾಂಗ್ರೆಸ್ ಬಾಗಿಲು ಸದಾ ತೆರೆದಿದ್ದು, ಸೂಕ್ತ ನಿರ್ಧಾರ ತಳೆಯಿರಿ. ಈ ಜಿಲ್ಲೆಗೆ ಸಹೋದರ ಸುರೇಶ್ ಮತ್ತು ನಾನು ರೆಡಿಮೇಡ್ ಗಂಡುಗಳಿದ್ದಂತೆ ಎಂದು ನಿನ್ನೆಯಷ್ಟೇ ಡಿಕೆಶಿ ನೀಡಿದ್ದ ಹೇಳಿಕೆಗೆ ರಾಜು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅಧಿಕಾರದ ಮದ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮರು ಚುನಾವಣೆ ಗೆಲವು, ಅಧಿಕಾರದ ಮದದಿಂದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಸಹೋದರರು ಉಡಾಫೆ ರಾಜಕಾರಣ ಮಾಡುತ್ತಿದ್ದು, ದುರಂಹಕಾರದಿಂದ ವರ್ತಿಸುತ್ತಿದ್ದಾರೆ. ಅವರಿಗೆ ಜನತೆಯಿಂದ ತಕ್ಕಪಾಠ ಕಾದಿದೆ ಎಂದು ರಾಜು ಎಚ್ಚರಿಸಿದರು.
ರಾಮನಗರ ಜಿಲ್ಲೆಯಲ್ಲಿ ಸಚಿವರಾಗಿ ಶಿವಕುಮಾರ್ ಮತ್ತು ಸಂಸದರಾಗಿ ಸುರೇಶ್ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಜೆಡಿಎಸ್ ಸಂಪೂರ್ಣ ಸಹಕಾರ ನೀಡುತ್ತದೆ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಪಕ್ಷ ಎಂದೂ ರಾಜಕಾರಣ ಮಾಡಿಲ್ಲ. ಡಿಕೆಶಿ ಸಹೋದರರಿಗೆ ಜಿಲ್ಲೆ ಬಗ್ಗೆ ಕಾಳಜಿ ಮತ್ತು ಬದ್ಧತೆ ಇದ್ದರೆ ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೆ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು.
ಭ್ರಷ್ಟಚಾರ ತಾಂಡವ: ಕೇಂದ್ರದಲ್ಲಿ ಎರಡು ಅವಧಿ ಆಡಳಿತ ನಡೆಸಿರುವ ಕಾಂಗ್ರೆಸ್ ನೇತೃತ್ವತ್ವದ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಎಲ್ಲ ಮಜಲುಗಳನ್ನು ಜನತೆ ನೋಡಿ, ಆ ಪಕ್ಷದ ವಿರುದ್ಧ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಭ್ರಮನಿರಸನವಾಗುವುದು ನಿಶ್ಚಿತ ಎಂದು ರಾಜು ಭವಿಷ್ಯ ನುಡಿದರು.
ಕಾಂಗ್ರೆಸ್ ಸಚಿವರು ಸರ್ಕಾರದ ಖಜಾನೆಗೆ ಕನ್ನ ಹಾಕಿದ್ದಾರೆ. ಅವರ ಲೂಟಿಯ ಪರಿಣಾಮ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಂಚಿಗೆ ತಲುಪಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ದೇಶಕ್ಕೆ ಯುಪಿಎ ಭಾಗ-1 ಮತ್ತು 2ರ ಸರ್ಕಾರವು ಹೊರೆಯಾಗಿರುವುದನ್ನು ಜನತೆ ಮನಗಂಡಿದ್ದಾರೆ ಎಂದರು.
ಯುವ ಚೇತನ ಸಮಾವೇಶ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಂದು ನಡೆಯುವ ಯುವ ಚೇತನ ಸಮಾವೇಶಕ್ಕೆ 2.5 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅಂದು ಬೆಳಗ್ಗೆ 7ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ನಂತರ ಬೈಕ್ ರ್ಯಾಲಿಯಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ರಾಜು ತಿಳಿಸಿದರು.
ಮಾರ್ಗ ಮಧ್ಯೆ ಸಿಗುವ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಕೂಡ ಬೈಕ್ ಏರಲಿದ್ದಾರೆ. ರಾಮನಗರದಲ್ಲಿ 2 ಸಾವಿರಕ್ಕೂ ಹೆಚ್ಚು ಬೈಕ್ಗಳಲ್ಲಿ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದಾರೆ ಎಂದರು. ಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಕೂಟಗಲ್ ದೇವೇಗೌಡ, ರಾಜಶೇಖರ್, ಬಿ.ಉಮೇಶ್, ಆರ್.ಎ. ಮಂಜುನಾಥ್, ಚಿಕ್ಕವೀರೇಗೌಡ, ದೊರೆಸ್ವಾಮಿ, ಶಿವಲಿಂಗಯ್ಯ ಹಾಜರಿದ್ದರು.