ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಆದ್ಯತೆ
ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ವಿವಿಧ ಅನುದಾನಗಳ ಅಡಿಯಲ್ಲಿ ಕೆಲ ಇಲಾಖೆಗಳ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಭಾನುವಾರ ಬೆಳಗ್ಗೆ ನಡೆಯಿತು.
ಸ್ಥಳೀಯ ಶಾಸಕ ಟಿ.ವೆಂಕಟರಮಣಯ್ಯ ಇಲ್ಲಿನ ಪ್ರವಾಸಿ ಮಂದಿರ ವೃತ್ತ, ಪಿಂಡಕೂರು ತಿಮ್ಮನಹಳ್ಳಿ, ನಗರಸಭೆ ವ್ಯಾಪ್ತಿ ಸೇರಿದಂತೆ ವಿವಿದೆಡೆ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬಂದಿರುವ ಸುಮಾರು 30 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಕ್ಷೇತ್ರದ ಅಭಿವೃದ್ಧಿಯ ದಿಕ್ಕುದೆಸೆಯನ್ನೇ ಬದಲಿಸಲಿದೆ. ನಗರಸಭೆ ವ್ಯಾಪ್ತಿ ಮತ್ತು ಗ್ರಾಮಾಂತರದ ವ್ಯಾಪ್ತಿಯಲ್ಲಿ ಹಲವು ಪ್ರಗತಿ ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದರು.
ಇಲ್ಲಿನ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರವಾಸಿ ಮಂದಿರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ನೆಲಮಂಗಲ-ಚಿಕ್ಕಬಳ್ಳಾಪುರ ಸಂಪರ್ಕ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ, ಪಿಂಡಕೂರು ತಿಮ್ಮನಹಳ್ಳಿ ಬಳಿ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಅದೇ ರೀತಿ ನಗರಸಭೆ ವ್ಯಾಪ್ತಿಯಲ್ಲಿ ಗಂಡು ಮಕ್ಕಳ ವಿದ್ಯಾರ್ಥಿ ನಿಲಯ, ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ, ಬಾಶೆಟ್ಟಿಹಳ್ಳಿ, ಕರೇನಹಳ್ಳಿಗಳಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಮಲ್ಲಾತಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ, ದೊಡ್ಡಬಳ್ಳಾಪುರ ನಗರದ ಅನಕೃ ರಸ್ತೆ ಮತ್ತು ಕೊಂಗಾಡಿಯಪ್ಪ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ, ಕುರುಬರಹಳ್ಳಿಯಲ್ಲಿ ಆಶ್ರಯ ಬಡಾವಣೆಯ ಕೊಳವೆ ಬಾವಿ ಶಂಕುಸ್ಥಾಪನೆ ಸೇರಿದಂತೆ ನಗರೋತ್ಥಾನ ಯೋಜನೆಯ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಸಿ.ಮಂಜುನಾಥ್, ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ಪೌರಾಯುಕ್ತ ಬಿಳಿಕೆಂಚಪ್ಪ, ತಾ.ಪಂ ಇಓ ಅಶ್ವತ್ಥರೆಡ್ಡಿ, ತಾ.ಪಂ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಕೆ.ಮುನಿಯಪ್ಪ, ಲೋಕೋಪಯೋಗಿ ಇಲಾಖೆ ಇಇ ಮೋಹನ್, ಕಾಂಗ್ರೆಸ್ ಮುಖಂಡ ಸತ್ಯನಾರಾಯಣಗೌಡ, ರಂಗರಾಜು, ಲಕ್ಷ್ಮೀಪತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.