ಜಯವಿಭವಸ್ವಾಮಿರನ್ನು ಸೇವೆಯಿಂದ ಅಮಾನತುಪಡಿಸಿ
ರಾಮನಗರ: ವಿಕಲಚೇತನರನ್ನು ಭಿಕ್ಷುಕರು ಎಂದು ಜರಿದಿರುವ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಜಯವಿಭವಸ್ವಾಮಿ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕೆಂದು ಆಗ್ರಹಿಸಿ ರಾಜ್ಯ ವಿಕಲಚೇತನರ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜಯವಿಭವಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಬಸವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಅಧಿಕ ಮಂದಿ ವಿಕಲಚೇತನರು ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದಾರೆ. ಇವರ ಪುನರ್ವಸತಿಗಾಗಿ ಗ್ರಾಮೀಣ ವಿಕಲಚೇತನರ ಪುನರ್ವಸತಿ ಯೋಜನೆಯನ್ನು ರೂಪಿಸಿದೆ. ಈ ಕಾರ್ಯಕ್ಕೆ ಅರ್ಹ ವಿಕಲಚೇತನರನ್ನೇ ನೇಮಿಸಿದ್ದು, ಗೌರವ ಧನ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಸೇವಾ ಭದ್ರತೆ ಇಲ್ಲ: ವಿಕಲಚೇತನರ ಪುನರ್ವಸತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ಕನಿಷ್ಠ ವೇತನ ನೀಡುತ್ತಿದ್ದು, ಸೇವಾ ಭದ್ರತೆ ಇಲ್ಲದಂತಾಗಿದೆ. 7 ವರ್ಷ ಸೇವಾವಧಿ ಪೂರೈಸಿದ ಕಾರ್ಯಕರ್ತರನ್ನು ಕಾಯಂ ಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಇದುವರೆಗೂ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸುಪ್ರೀಂ ಕೋರ್ಟ್ ಆದೇಶದನ್ವಯ ಕಾರ್ಯಕರ್ತರನ್ನು ಕಾಯಂ ಗೊಳಿಸುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರನ್ನು ಕೋರಿದಾಗ ಕೋಪೋದ್ರಿಕ್ತರಾದ ಅವರು ನೀವು ಭಿಕ್ಷುಕರಾಗಿದ್ದು, ಸರ್ಕಾರಕ್ಕೆ ಹೊರೆಯಾಗಿದ್ದೀರಿ. ಪುನರ್ವಸತಿ ಯೋಜನೆಯನ್ನೇ ತೆಗೆದು ಹಾಕುತ್ತೇನೆಂದು ಹರಿಹಾಯ್ದರು ಎಂದು ಅವರು ಆರೋಪಿಸಿದರು.
ಭಿಕ್ಷುಕರು ಎಂದು ಅವಮಾನಿಸಿರುವ ಜತೆಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಿದ್ದ ಅವಕಾಶವನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲು ಹುನ್ನಾರ ನಡೆಸುತ್ತಿದ್ದಾರೆ. ಹೀಗಾದಲ್ಲಿ ವಿಕಲಚೇತನರ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಜಯವಿಭವಸ್ವಾಮಿ ಅವರಂತಹ ಅಧಿಕಾರಿಗಳಿಂದ ವಿಕಲಚೇತನರ ಅಭ್ಯುದಯ ಸಾಧ್ಯವಾಗುವುದಿಲ್ಲ. ಈ ವ್ಯಕ್ತಿಯನ್ನು ಕೂಡಲೇ ಅಮಾನತುಗೊಳಿಸಿ, ಆ ಜಾಗಕ್ಕೆ ದಕ್ಷ, ಪ್ರಾಮಾಣಿಕ ಹಾಗೂ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿಯನ್ನು ನಿರ್ದೇಶಕರನ್ನಾಗಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹದೇವು, ಇಮ್ತಿಯಾಜ್ ಪಾಷ, ಅಸ್ಲಂ ಪಾಷ, ಗೋಪಾಲಸ್ವಾಮಿ, ಹರೀಶ, ರಾಮಚಂದ್ರ, ಜಯಮ್ಮ ಭಾಗವಹಿಸಿದ್ದರು.