ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಾನಂದೂರು ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷಪ್ಯಾಕೇಜ್

Rashmi Kasaragodu
Updated On : 28 Jan 2014, 1:31 am

ರಾಮನಗರ: ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರಾದ ರಾಮನಗರ ತಾಲೂಕಿನ ಬಾನಂದೂರು ಸರ್ವಾಂಗೀಣ ಅಭಿವೃದ್ಧಿಗೆ ಈ ಬಾರಿ ಆಯವ್ಯಯದಲ್ಲಿ ವಿಶೇಷಪ್ಯಾಕೇಜ್ ಮಂಜೂರಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಈಚೆಗೆ ಆದಿಚುಂಚನಗಿರಿಯಲ್ಲಿ ಈಚೆಗೆ ನಡೆದ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರ ಹೆಸರನ್ನು ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ಅವರ ಹುಟ್ಟೂರು ಬಾನಂದೂರನ್ನು ಅಭಿವೃದ್ಧಿಪಡಿಸುವ ಘೋಷಣೆ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಚೊಚ್ಚಲ ಭೇಟಿಯಲ್ಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡದೊಂದಿಗೆ ಬಾನಂದೂರಿನಲ್ಲಿ ತೆರಳಿ ಜನ ಸ್ಪಂದನ ಕಾರ್ಯಕ್ರಮ ನಡೆಸಿ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಸುದೀರ್ಘ ಸಮಾಲೋಚನೆ ನಡೆಸಿದರು.
ಇದು ಪವಿತ್ರ ಸ್ಥಳ: ಬಾನಂದೂರನ್ನು ಅಭಿವೃದ್ಧಿ ಮಾಡಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಶ್ರೀ ಬಾಲಗಂಗಾಧರರು ಜನಿಸಿದ ಇದು ಪವಿತ್ರ ಸ್ಥಳ ಇದಾಗಿದ್ದು, ಅವರನ್ನು ಸಾಕಿ ಸಲಹಿದವರ ಅಭಿಪ್ರಾಯ, ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳ ಸಲಹೆ ಪಡೆದು, ಈ ಪುಣ್ಯ ಭೂಮಿಯ  ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಗ್ರಾಮಸ್ಥರ ಸಲಹೆ: ಶ್ರೀ ಬಾಲಗಂಗಾಧರ ನಾಥ ಸಾಮೀಜಿ ಅವರು ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಗ್ರಾಮಕ್ಕೆ ಸಾಕಷ್ಟು ಕೊಡುಗೆ ನೀಡಿರುವರು. ಜಿಲ್ಲಾ ಕೇಂದ್ರದಲ್ಲಿ ದೊರಕುವ ಎಲ್ಲಾ ಸೌಲಭ್ಯಗಳು ಇಲ್ಲಿ ದೊರಕುವಂತಾಗಬೇಕು. ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಬಾನಂದೂರಿನಿಂದ ಬಿಡದಿ ಮತ್ತು ಇತರೆ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡುವ ಕಾರ್ಯವಾಗಬೇಕು ಎಂದು ಗ್ರಾಮಸ್ಥರಾದ ನಂಜಪ್ಪ, ಗಂಗಾಧರ್, ಕುಮಾರ್ ಮತ್ತಿತರರು ಸಲಹೆ ನೀಡಿದರು.
ದೂರದೃಷ್ಟಿ ಯೋಜನೆ: ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮ ಸ್ಥಳವನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವುದು ಉತ್ತಮ ಚಿಂತನೆಯಾಗಿದೆ. ಇನ್ನು 40-50 ವರ್ಷಗಳ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕವಷ್ಟೇ ಶ್ರೀಗಳ ಹೆಸರನ್ನು ಅಜರಾಮರವಾಗಿಸಲು ಸಾಧ್ಯ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.  
ರು.50 ಕೋಟಿಗೆ ಬೇಡಿಕೆ: ಈ ಗ್ರಾಮದಲ್ಲಿ ಈಗಾಗಲೇ ಸುವರ್ಣ ಗ್ರಾಮ, ಸ್ವಚ್ಛ ಗ್ರಾಮ ಯೋಜನೆಯಡಿ ಹಲವಾರು ಸೌಕರ್ಯಗಳನ್ನು ಒದಗಿಸಿದ್ದರೂ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಗಳಿಸುವ ಹೆಸರು ಆಗಿರಲಿಲ್ಲ. ಈಗ ಅವಕಾಶ ದೊರಕಿದೆ. ಜಿಲ್ಲಾ ಸಚಿವರು ಜವಾಬ್ದಾರಿ ತೆಗೆದುಕೊಂಡಿರುವುದು ಶ್ಲಾಘನೀಯ ಕೆಲಸ ಎಂದು ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರಶಂಸಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ,  ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಮಾತನಾಡಿದರು.  ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಸದಸ್ಯರಾದ ಶಾಂತಮ್ಮ ವೆಂಕಟೇಶ್, ಎಚ್.ಎಲ್.ಚಂದ್ರು, ತಹಸೀಲ್ದಾರ್ ಹನುಂತರಾಯಪ್ಪ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸದಸ್ಯರಾದ ಮಹೀಪತಿ, ಶೀಲಮ್ಮ ರಾಮಕೃಷ್ಣಪ್ಪ, ಇಒ ಟಿ.ಎಚ್.ವೆಂಕಟೇಶ್, ಕೆಎಂಎಫ್ ನಿರ್ದೇಶಕ ಪಿ.ನಾಗರಾಜು, ಕಾಂಗ್ರೆಸ್ ಮುಖಂಡ ಮರಿದೇವರು ಭಾಗವಹಿಸಿದ್ದರು. ಉಪ ವಿಭಾಗಾಧಿಕಾರಿ ಸಿದ್ದಪ್ಪ ನಿರೂಪಿಸಿದರು. ಇದೇ ವೇಳೆ  ಫಲಾನುಭವಿಗಳಿಗೆ ಹಕ್ಕು ಪತ್ರ ಮತ್ತು ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement