ಅಕ್ರಮ ಮರಳು ದಂಧೆ ಹೋರಾಟಕ್ಕಿಲ್ಲ ಸ್ಪಂದನೆ ತಾಲೂಕು ಕಚೇರಿಗೆ ರೈತರ ದಿಗ್ಬಂಧನ, ಆಕ್ರೋಶ
ಕ.ಪ್ರ.ವಾರ್ತೆ, ಚನ್ನಪಟ್ಟಣ, ಜ.28
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸಿದ್ದರಾಮ ಹೆಗಡೆ ನಡೆಸುತ್ತಿರುವ ಹೋರಾಟಕ್ಕೆ 9ದಿನ ಕಳೆದರೂ ಸ್ಪಂದಿಸದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ತಾಲೂಕು ಕಚೇರಿಗೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ. ರಾಮು ನೇತೃತ್ವದಲ್ಲಿ ಮುತ್ತಿಗೆ ಹಾಕಿದ ರೈತಸಂಘದ ಅಸಂಖ್ಯಾತ ಕಾರ್ಯಕರ್ತರು ಸತತ ನಾಲ್ಕು ಗಂಟೆಗಳಿಗೂ ಹೆಚ್ಚುಕಾಲ ತಾಲೂಕು ಕಚೇರಿಗೆ ಯಾರೂ ಒಳಗೆ ಹೋಗದಂತೆ, ಒಳಗಿನವರು ಯಾರೂ ಹೊರಗೆ ಬರದಂತೆ ದಿಗ್ಬಂಧನ ಹಾಕಿದರು.
ಕಳೆದ 10 ವರ್ಷಗಳಿಂದ ರೈತಸಂಘ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದೆ. ಆದರೆ ಅಧಿಕಾರಿಗಳು ಹಣದ ಆಸೆಗಾಗಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಪರಿಣಾಮ ತಾಲೂಕು ಇಂದು ಅಂತರ ಜಲದ ಕುಸಿತ, ಬೆಳೆ ನಷ್ಟ ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ಮರಳು ದಂಧೆಯಲ್ಲಿ ಭಾಗಿಯಾಗಿರುವ ಮಂದಿ ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಆರ್‌ಟಿಒ ಕೆಲ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಪಡಿಸಿ, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಭೂದಾಖಲೆಗಳನ್ನು ಪಡೆಯಲು ರೈತರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಖ್ಯವಾಗಿ ಹೋಬಳಿ ಕೇಂದ್ರಗಳಲ್ಲಿ ಪಡೆದ ಪಹಣಿಗಳಲ್ಲಿ ಬೆಳೆ ಕಾಲಂನಲ್ಲಿ ಬೆಳೆ ನಮೂದಾಗದೇ ಇರುವುದರಿಂದ ಅಂಥ ಪಹಣಿಗಳಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳು ದೊರಕುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಪಹಣೆ ಸಿದ್ಧಪಡಿಸುವಾಗ ಲೋಪ ಎಸಗಿರುವ ಪರಿಣಾಮ ಆನ್‌ಲೈನ್ ಮೂಲಕ ದೊರೆವ ಪಹಣೆಗಳು ದೋಷಗಳಿಂದ ಕೂಡಿವೆ ಎಂದು ದೂರಿದರು.
ಜಿಲ್ಲಾಧಿಕಾರಿಗಳು ಹೋಬಳಿ ಕೇಂದ್ರದಲ್ಲಿ ಪಹಣಿ ತಿದ್ದುಪಡಿ, ಪೌತಿ ಖಾತೆ ಬದಲಾವಣೆ, ಪಿಂಚಣಿ ಅದಾಲತ್ ನಡೆಸುವುದಾಗಿ ಸುಮ್ಮನಾಗಿದ್ದಾರೆ. ತಕ್ಷಣವೇ ಅದಾಲತ್ ನಡೆಸಿ, ಭೂದಾಖಲೆಗಳ ಲೋಪಗಳನ್ನು ಮತ್ತು ವೃದ್ಧಾಪ್ಯ, ವಿಕಲಚೇತನ ಹಾಗೂ ವಿಧವಾ ವೇತನದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು. ನಮ್ಮ ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಎಸಿ ಮಧ್ಯಸ್ಥಿಕೆ: ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ರುದ್ರಪ್ಪ ಎಲ್ಲಾ ಬೇಡಿಕೆಗಳನ್ನು ಪರಿಹರಿಸುವುದಾಗಿ ಸೂಚಿಸಿದರಲ್ಲದೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ಹೋರಾಟದ ಬಗ್ಗೆ ಇನ್ನೊಂದು ದಿನದಲ್ಲಿ ಜಿಲ್ಲಾಡಳಿತದ ಜತೆಗೆ ತಾಲೂಕಿನ ಜನಪರ ಸಂಘಟನೆಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಚರ್ಚೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಮಲ್ಲಯ್ಯ, ತಾಲೂಕು ಅಧ್ಯಕ್ಷ ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ.ಎನ್. ರಾಜು, ಹಮ್ಮಳ್ಳಿ ದೊಡ್ಡಿ ನಾಗೇಶ್, ಕೃಷ್ಣಪ್ಪ, ಕನ್ನಡ ಪರ ಹೋರಾಟಗಾರ ಸಿಂ.ಲಿಂ. ನಾಗರಾಜು, ಕರವೇ ತಾಲೂಕು ಅಧ್ಯಕ್ಷ ಸಾಗರ್, ವಕೀಲರಾದ ಎಂ.ಕೆ. ನಿಂಗಪ್ಪ, ಸಿದ್ದರಾಜು, ಮದ್ದೂರೆಗೌಡ, ರಾಂಪುರ ಧರಣೀಶ್ ಮುಂತಾದವರು ಉಪಸ್ಥಿತರಿದ್ದರು.
ರಾತ್ರಿ 30 ಲಾರಿ ಮರಳು ಹೋಯ್ತು
ಕಳೆದ 9 ದಿನಗಳಿಂದ ಅಕ್ರಮ ಮರಳು ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಸಿದ್ದರಾಮ ಹೆಗ್ಗಡೆ ಸತ್ಯಾಗ್ರಹ ನಡೆಸುತ್ತಿದ್ದಾರೆ ಆದರೆ ಮರಳು ಗಣಿಗಾರಿಕೆ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಿವೆ, ಕಳೆದ ರಾತ್ರಿ 30 ಲಾರಿಗಳು ಹೋಗಿದ್ದನ್ನು ನಾನೇ ನೋಡಿದ್ದೇನೆ, ನಿಮಗೆ ಇಚ್ಚೆ ಇದ್ದರೆ ನನ್ನ ಜತೆ ಬನ್ನಿ ನಾನೇ ಹಿಡಿದು ಕೊಡುತ್ತೇನೆ ಎಂದು ಹಿರಿಯ ಕನ್ನಡ ಪರ ಹೋರಾಟಗಾರ ಸಿಂ.ಲಿಂ. ನಾಗರಾಜು ಉಪವಿಭಾಗಾಧಿಕಾರಿಗೆ ಸವಾಲಾಕಿದರು.
ತಹಸೀಲ್ದಾರ್ ಗೈರು
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ತಹಶೀಲ್ದಾರ್ ಶಿವರುದ್ರಪ್ಪ ಕಚೇರಿಯತ್ತ ಸುಳಿಯಲಿಲ್ಲ. ಈ ಬಗ್ಗೆ ಕಚೇರಿಯ ಸಿಬ್ಬಂದಿಯನ್ನು ವಿಚಾರಿಸಿದರೆ ಅವರು ನ್ಯಾಯಾಲಯಕ್ಕೆ ಕೆಲಸದ ಮೇಲೆ ಹೋಗಿದ್ದಾರೆ ಎಂದು ಉತ್ತರಿಸಿದರು.
ವಿಷ ಕುಡಿಯ ಹೊರಟ ವೃದ್ಧೆ
ಮೂರು ವರ್ಷದಿಂದ ಖಾತೆ ಮಾಡಿಸಿಕೊಳ್ಳಲು ಕಚೇರಿಗೆ ಸುತ್ತಾಡಿ ಸುಸ್ತಾದ ತಾಲ್ಲೂಕಿನ ಕುರಿದೊಡ್ಡಿ ಗ್ರಾಮ ವೃದ್ಧೆ ಲಿಂಗಮ್ಮ ನಮ್ಮ ಕೆಲಸ ಮಾಡಿಕೊಡ್ತೀರೋ ಇಲ್ಲ ವಿಷ ಕುಡಿಯಲೋ ಎಂದು ಉಪವಿಭಾಗಾಧಿಕಾರಿ ಮುಂದೆ ವಿಷದ ಬಾಟಲಿ ಪ್ರದರ್ಶಿಸಿದರು.ತಕ್ಷಣ ಎಚ್ಚೆತ್ತ ಪೊಲೀಸ್ ನಗರ ವೃತ್ತ ನಿರೀಕ್ಷಕ ಅಂಜನ್‌ಕುಮಾರ್ ವಿಷದ ಬಾಟಲಿಯನ್ನು ಕಿತ್ತುಕೊಂಡು ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದರು. ಕಳೆದ ಮೂರು ವರ್ಷದ ಹಿಂದೆ ನನ್ನ ಪತಿ ಸಾವಿಗೀಡಾಗಿದ್ದು, ಪೌತಿಖಾತೆ ಮಾಡಿಕೊಡಲು ಗ್ರಾಮಲೆಕ್ಕಾಧಿಕಾರಿಗೆ ಹಣ ನೀಡಲಾಗಿದೆಯಾದರೂ ಸಂಬಂಧಿಸಿದ ಮಂದಿ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಗಮನಹರಿಸಿ ಎಂದು ಉಪವಿಭಾಗಾಧಿಕಾರಿಗೆ ಒತ್ತಾಯಿಸಿದರು.