ಶೌಚಾಲಯ ನಿರ್ಮಾಣಕ್ಕೆ ಬೇಜವಾಬ್ದಾರಿ ಬೇಡ: ಬೆಟ್ಟಸ್ವಾಮಿ
ಕನಕಪುರ: ಮಾನವನ ಮೂಲಭೂತ ಅಗತ್ಯಗಳಲ್ಲೊಂದಾದ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಬೇಜವಾಬ್ದಾರಿ ತೋರುತ್ತಿರುವ ಜನರು ಇಂದಿಗೂ ಬಯಲು ಶೌಚ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜಿಪಂ ಸಿಇಒ ಬೆಟ್ಟಸ್ವಾಮಿ ಹೇಳಿದರು.
ಅವರು ಕನಕಪುರ ತಾಲೂಕು ಹಾರೋಹಳ್ಳಿ ಗ್ರಾಮದಲ್ಲಿ ಕೆನರಾಬ್ಯಾಂಕ್ ಗ್ರಾಮೀಣ ಮಹಿಳಾ ಉದ್ಯೋಗ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ನಿರ್ಮಲ ಭಾರತ ಯೋಜನೆಯ ಫಾಸ್ಟ್ಟ್ರಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜನರು ಶೌಚಾಲಯಕ್ಕೆ ನೀಡಿದ ಅನುದಾನ ಬಳಸಿಕೊಂಡು ಕುರಿಕೋಳಿಗಳನ್ನು ಸಾಕಲು ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ಸವಲತ್ತುಗಳನ್ನು ದುರುಪಯೋಗ ಮಾಡುವ ಮನೋಭಾವ ಸರಿಯಲ್ಲ. ಶೌಚಾಲಯ ನಿರ್ಮಾಣಕ್ಕೆ ಇಲಾಖೆ ವತಿಯಿಂದ ಹತ್ತು ಸಾವಿರ ಸಹಾಯಧನ ನೀಡುತ್ತಿದ್ದು ಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮೇಣದಬತ್ತಿ ತಯಾರಿಕೆ ಹಾಗೂ ಹೈನುಗಾರಿಕೆ ಸ್ವಉದ್ಯೋಗ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅತಿಥಿಗಳಾಗಿ ಶೈಲಶ್ರೀ, ಹಾಲೇಶ್, ಅರುಣಾ, ಸವಿತಾ, ಜ್ಯೋತಿ ಪಾಲ್ಗೊಂಡಿದ್ದರು.