ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸ್ಮಶಾನಕ್ಕೆ ಹೋಗಲು ದಾರಿಗಾಗಿ ಶವವಿಟ್ಟು ಪ್ರತಿಭಟನೆ

Mainashree
Updated On : 29 Jan 2014, 12:32 pm

ರಾಮನಗರ: ಸ್ಮಶಾನಕ್ಕೆ ಹೋಗಲು ಸವರ್ಣೀಯರು ದಾರಿ ಬಿಡುತ್ತಿಲ್ಲವೆಂದು ಆರೋಪಿಸಿ ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಬೋವಿ ಜನಾಂಗದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಶವವಿಟ್ಟು ಪ್ರತಿಭಟಿಸಿದರು.  ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಗ್ರಾಮದ ದಲಿತ ಯುವ ಕುಮಾರ್(19) ಶವವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಇಟ್ಟುಕೊಂಡು, ಸ್ಮಶಾನಕ್ಕೆ ದಾರಿಗಾಗಿ ಗ್ರಾಮಸ್ಥರು ಆಗ್ರಹಿಸಿದರು. ಆ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತರ ಕುಂದುಕೊರತೆ ಸಭೆ ನಡೆಯುತ್ತಿತ್ತು.  ಗ್ರಾಮ ಸಮೀಪದ ಶಿವನಹಳ್ಳಿ ಸರ್ವೆ ನಂ.96ರಲ್ಲಿರುವ ನೂರಾರು ಎಕರೆ ಗೋಮಾಳ ಜಮೀನನ್ನು ಸವರ್ಣೀಯರು ಅತಿಕ್ರಮಿಸಿ, ಬೇಸಾಯ ಮಾಡುತ್ತಿದ್ದಾರೆ. ಅಲ್ಲಿ ದಲಿತರ ಸ್ಮಶಾನಕ್ಕೆ 2 ಎಕರೆ ಜಮೀನು ಮಂಜೂರಾಗಿದ್ದು, ಸದರಿ ಜಾಗಕ್ಕೆ ತೆರಳಲು ದಾರಿ ಇಲ್ಲದಾಗಿದೆ ಎಂದು ದೂರಿದರು. ಸ್ಮಶಾನ ಜಾಗದ ಹದ್ದುಬಸ್ತು ಗೊತ್ತುಪಡಿಸಿ, ಸುತ್ತಲೂ ತಂತಿ ಬೇಲಿ ಇಲ್ಲವೇ ಕಾಂಪೌಂಡ್ ನಿರ್ಮಿಸಬೇಕು. ದಲಿತರು ಶವ ಕೊಂಡೊಯ್ಯಲು ಸವರ್ಣೀಯರು ಅಡ್ಡಿಪಡಿಸುತ್ತಿರುತ್ತಾರೆ. ನಮಗೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರ ದೂರು ಆಲಿಸಿದ ಅಪರ ಜಿಲ್ಲಾಧಿಕಾರಿ ಬಸವರಾಜು, ಸ್ಮಶಾನ ಜಾಗ ಅಳತೆ ಮಾಡಿ ಹದ್ತುಬಸ್ತು ನಿಗದಿಪಡಿಸಿ ದಾರಿ ಕಲ್ಪಿಸುವಂತೆ ತಹಸೀಲ್ದಾರ್ ಹನುಮಂತರಾಯಪ್ಪ ಅವರಿಗೆ ಆದೇಶಿಸಿದರು. ನಂತರ ಪ್ರತಿಭಟನೆ ಅಂತ್ಯವಾಯಿತು. ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ವಡ್ಡರದೊಡ್ಡಿಗೆ ಕೊಂಡೊಯ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement