ಖಾತಾ ಆಂದೋಲನಾ ಅಭಿಯಾನ
ಮಾಗಡಿ: ಮಾಗಡಿಯಲ್ಲಿ ಜ.31 ರಿಂದ ಫೆ.28 ರವರೆಗೆ ಖಾತಾ ಆಂದೋಲನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಶಿವಕುಮಾರ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಅನೇಕ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿ ಖಾತೆ ಬದಲಾವಣೆ, ಕಲಂ 3 ಮತ್ತು 9 ತಿದ್ದುಪಡಿ ಹಾಗೂ ಸಾಮಾಜಿಕ ಭದ್ರತೆಯ ಯೋಜನಗೆಳಾದ ಪಿಂಚಣಿ ಅದಾಲತ್, ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ. ಜ.31 ರಂದು ಸೋಲೂರು ಹೋಬಳಿಯಲ್ಲಿ, ಫೆ.12 ರಂದು ಮಾಡಬಾಳ್, ಫೆ.16 ರಂದು ತಿಪ್ಪಸಂದ್ರ, ಫೆ.22 ರಂದು ಕುದೂರು, ಫೆ.28 ರಂದು ಕಸಬಾ ಹೋಬಳಿ ಕೇಂದ್ರಗಳಲ್ಲಿ ಖಾತಾ ಆಂದೋಲನಾ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಹಾಜರಾಗುವ ಮೂಲಕ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಇಂದು ಪಶು ವೈದ್ಯರ ತಾಂತ್ರಿಕ ಕಾರ್ಯಾಗಾರ
ರಾಮನಗರ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶು ವೈದ್ಯರ ತಾಂತ್ರಿಕ ಕಾರ್ಯಾಗಾರವು ಜ.30ರ ಬೆಳಗ್ಗೆ 10.30ಕ್ಕೆ ಜಿ.ಪಂ. ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಉದ್ಘಾಟಿಸುವರು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಂ.ಬಿ.ದೇವರಾಜು ಅಧ್ಯಕ್ಷತೆ ವಹಿಸುವರು. ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ವಿಜ್ಞಾನಿ ಡಾ.ರವೀಂದ್ರ ಹೆಗ್ಗಡೆ, ಡಾ.ಶ್ರೀನಿವಾಸ ರೆಡ್ಡಿ, ಡಾ.ಶಿವಶರಣಪ್ಪ ಯಲಗೋಡ ಭಾಗವಹಿಸುವರು.
ಇಂದು ಬೇಂದ್ರೆಯವರ ಜಯಂತಿ
ರಾಮನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಟೇಲ್ ಪಬ್ಲಿಕ್ ಶಾಲೆಯಿಂದ ವರ ಕವಿ ದ.ರಾ.ಬೇಂದ್ರೆಯವರ ಜಯಂತಿ ಹಾಗೂ ಗೀತಗಾಯನ ಕಾರ್ಯಕ್ರಮವು ಜ.30ರ ಬೆಳಗ್ಗೆ 10.30ಕ್ಕೆ ಪಟೇಲಲ್ಪಬ್ಲಿಕ್ಶಾಲೆ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಶಾಲೆಯ ಕಾರ್ಯದರ್ಶಿ ಸಿ.ರಾಜು, ಉಪನ್ಯಾಸಕ ಡಾ.ಪಾರ್ಥ, ನಗರಸಭೆ ಸದಸ್ಯೆ ಮಂಗಳಾಶಂಭುಗೌಡ, ಉದ್ಯಮಿ ರಾಜೇಶ್ ಭಾಗವಹಿಸುವರು.
ಲೋಕಾಯುಕ್ತ ಅದಾಲತ್ ಇಂದು
ಮಾಗಡಿ: ಮಾಗಡಿ ತಾಲೂಕಿನ ಸೋಲೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಜ.30 ರಂದು ಬೆ.11 ಗಂಟೆಗೆ ಲೋಕಾಯುಕ್ತ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಲೋಕಾಯುಕ್ತ ಎಸ್ಪಿ ಆಗಮಿಸಲಿದ್ದಾರೆ. ಸಾರ್ವಜನಿಕ ಕಚೇರಿಗಳಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದರೆ, ಇತರೆ ಸಾರ್ವಜನಿಕ ದೂರುಗಳಿದ್ದರೆ ಸಾರ್ವನಿಕರು ರಾಮನಗರ ಲೋಕಾಯುಕ್ತ ಎಸ್ಪಿ ಅವರಲ್ಲಿ ನೇರವಾಗಿ ದೂರು ಸಲ್ಲಿಸಬಹುದು ಎಂದು ಶಿವಕುಮಾರ್ ತಿಳಿಸಿದ್ದಾರೆ.
ಫೆ. 3ಕ್ಕೆ ಹಿತರಕ್ಷಣಾ ಸಮಿತಿ ಸಭೆ
ರಾಮನಗರ: ಮಾಗಡಿ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯು ಫೆ.3ರ ಬೆಳಗ್ಗೆ 11ಕ್ಕೆ ಮಾಗಡಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಬಾಲಕ ನಾಪತ್ತೆ
ರಾಮನಗರ: ಇಲ್ಲಿನ ಯಾರಬ್ ನಗರದ ನಿವಾಸಿ ನಯಾಜ್ ಪಾಷ ಅವರ ಮಗ 12 ವರ್ಷದ ನಾಸೀರ್ ಪಾಷ ಜ.20 ರಿಂದ ಕಾಣೆಯಾಗಿದ್ದಾನೆ. ಮದರಸಾಗೆ ಹೋಗಿ ಬರುವುದಾಗಿ ಹೋದವನು ವಾಪಸ್ ಮನೆಗೆ ಬಂದಿರುದಿಲ್ಲ. ಎಣ್ಣೆಗೆಂಪು ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ನಾಸಿರ್ ಪಾಷ 3.5 ಅಡಿ ಎತ್ತರವಿದ್ದು, ಉರ್ದು ಭಾಷೆ ಮಾತನಾಡುತ್ತಾನೆ. ಈ ಬಾಲಕನ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪುರ ಪೊಲೀಸರು ಕೋರಿದ್ದಾರೆ.