ದೇವನಹಳ್ಳಿ, ಹೊಸಕೋಟೆ ತಾಲೂಕುಗಳಿಗೆ ಪ್ರತ್ಯೇಕ ಉಪವಿಭಾಗಾಧಿಕಾರಿ ಕಚೇರಿ?
ದೇವನಹಳ್ಳಿ: ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕುಗಳು ಸೇರಿ ಪ್ರತ್ಯೇಕವಾಗಿ ಕಂದಾಯ ಉಪ ವಿಭಾಗದ ಕಚೇರಿಯನ್ನು ಇಲ್ಲಿ ಪ್ರತ್ಯೇಕವಾಗಿ ಆರಂಭಿಸಲು ಮುಖ್ಯಮಂತ್ರಿಗಳು ಪ್ರಧಾನ ಕಾರ್ಯದರ್ಶಿಯವರಿಗೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದಾರೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ, ಪ್ರಧಾನ ಕಾರ್ಯದರ್ಶಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ನಂತರ ದೇವನಹಳ್ಳಿಯಲ್ಲಿ ಪ್ರತ್ಯೇಕ ಎಸಿ ಕಚೇರಿ ಆರಂಭಿಸುವ ಸಂಭವ ಇದೆ ಎಂದು ಶಾಸಕರು ತಿಳಿಸಿದರು. ಜಿಲ್ಲಾ ಹೋರಾಟ ಸಮಿತಿಯವರು ಕಳೆದ ಹತ್ತು ದಿನಗಳಿಂದ ಮಿನಿ ವಿಧಾನಸೌಧದ ಬಳಿ ಧರಣಿ ನಡೆಸುತ್ತಿದ್ದು ಮಂಗಳವಾರ ದೇವನಹಳ್ಳಿ ಬಂದ್ ನಡೆಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್, ದೊಡ್ಡಬಳ್ಳಾಪುರ ಕ್ಷೇತ್ರದ ಟಿ.ವೆಂಕಟರಮಣಯ್ಯ, ನೆಲಮಂಗಲ ಕ್ಷೇತ್ರದ ಡಾ.ಶ್ರೀನಿವಾಸಮೂರ್ತಿ ಹಾಗೂ ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಪ್ರತ್ಯೇಕ ಕಂದಾಯ ಉಪ ವಿಭಾಗದ ಕಚೇರಿ ದೇವನಹಳ್ಳಿಯಲ್ಲಿರುವಂತೆ ಮನವಿ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ದೇವನಹಳ್ಳಿಯಲ್ಲಿ ಪ್ರತ್ಯೇಕ ಕಂದಾಯ ಉಪ ವಿಭಾಗದ ಕಚೇರಿ ತೆರೆಯಲು ಸೂಕ್ತ ನಿರ್ದೇಶನ ನೀಡಬೇಕೆಂದು ಮಂಗಳವಾರ ಕೋರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯಂತೆ ದೇವನಹಳ್ಳಿಯಲ್ಲಿ ಕಂದಾಯ ಉಪ ವಿಭಾಗ ಕಚೇರಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಸೂಕ್ತ ಪ್ರಸ್ತಾವನೆ ಮಾಡಬೇಕೆಂದು ಸೂಚಿಸಿದ್ದಾರೆ ಎಂದೂ ಶಾಸಕ ಪಿಳ್ಳಮುನಿಶಾಮಪ್ಪ ಪತ್ರಕರ್ತರಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳ ಮತ್ತು ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿಗಳನ್ನು ಸ್ಥಳಾಂತರ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು.