ಬಡಜನರಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೈಜೋಡಿಸಿ
ರಾಮನಗರ: ಬಡಜನರಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳು ಹಾಗೂ ಶ್ರೀಮಂತರು ಕೈಜೋಡಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಮನವಿ ಮಾಡಿದರು.
ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಉಜ್ಜೀವನ್ ಸಂಸ್ಥೆಯು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ನೀಡಿದ ಶೈಕ್ಷಣಿಕ ಪರಿಕರಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ನಿಲಯಗಳ ಮೂಲಭೂತ ಸೌಕರ್ಯಗಳ ವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ದಾನಿಗಳೂ ಕೈಜೋಡಿಸಿದರೆ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಉಜ್ಜೀವನ್ ಮೈಕ್ರೋ ಪೈನಾನ್ಸ್ ಸಂಸ್ಥೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಸಾಲ ಯೋಜನೆಯನ್ನು ನೀಡುತ್ತಿದೆ. ಇದರ ಜತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯವನ್ನೂ ಕೈಗೆತ್ತಿಕೊಂಡಿದ್ದು, ನೀರು ಶುದ್ಧೀಕರಣ ಯಂತ್ರ, ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಗಳು, ಅಲ್ಮೆರಾ ಮತ್ತು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದೆ. ಸಂಸ್ಥೆಯು ಮಾಡುತ್ತಿರುವ ಸಾಮಾಜಿಕ ಸೇವೆಯು ಪ್ರಶಂಸನೀಯವಾದುದು ಎಂದರು.
ಸ್ವಚ್ಛತೆ ಅಗತ್ಯ: ವಿದ್ಯಾರ್ಥಿ ನಿಲಯಗಳ ಸವಲತ್ತು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಸಹ ನಿಲಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿಲಯದಲ್ಲಿನ ಪೀಠೋಪಕರಣಗಳನ್ನು ಜಾಗ್ರತೆಯಾಗಿ ಬಳಸಬೇಕು, ಸಮಯ ವ್ಯರ್ಥ ಮಾಡದೆ ಶೈಕ್ಷಣಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಣವನ್ನು ಗಳಿಸುವುದು ಎಷ್ಟು ಮುಖ್ಯವೋ ಗಳಿಸಿದ ಹಣವನ್ನು ಉಳಿತಾಯ ಮಾಡುವುದೂ ಅಷ್ಟೇ ಮುಖ್ಯವಾದುದು. ಜೀವನದಲ್ಲಿ ಎಷ್ಟು ಸಂಪಾದಿಸಿದ್ದೀರಿ ಎಂಬುದು ಮುಖ್ಯವಲ್ಲ, ಎಷ್ಟು ಉಳಿಸಿದ್ದೀರಿ ಎಂಬುದೇ ಮುಖ್ಯ. ಉಳಿತಾಯ ಮಾಡಿರುವ ಹಣ ಕಷ್ಟಕಾಲದಲ್ಲಿ ನೆರವಿಗೆ ಬರುತ್ತದೆ. ಹಾಗಾಗಿ ಬ್ಯಾಂಕ್ಗಳಲ್ಲಿ ಖಾತೆ ತೆರೆದು ಉಳಿತಾಯ ಮಾಡುವಂತೆ ಲೀಡ್ ಬ್ಯಾಂಕ್ನ ಆರ್ಥಿಕ ಸಾಕ್ಷರತಾ ಅಧಿಕಾರಿ ಸುರೇಶ್ಬಾಬು ಕಿವಿಮಾತು ಹೇಳಿದರು.
ನಾಮಿನಿ ಮಾಡಲೇಬೇಕು: ಬ್ಯಾಂಕ್ಗಳಲ್ಲಿ ಖಾತೆ ತೆರೆದು ಉಳಿತಾಯ ಠೇವಣಿ ಇಡುವ ಸಂದರ್ಭದಲ್ಲಿ ತಪ್ಪದೇ ನಾಮಿನಿ ಮಾಡಬೇಕು. ಹಾಗೂ ಹಣವನ್ನು ಠೇವಣಿ ಇರಿಸಿರುವ ಬಗ್ಗೆ ನಾಮಿನಿದಾರರಿಗೆ ತಿಳಿಸಬೇಕು. ಹೀಗೆ ಮಾಡಿದರೆ ಠೇವಣಿ ಇಟ್ಟವರು ಆಕಸ್ಮಿಕ ಮರಣ ಹೊಂದಿದರೆ ನಾಮಿನಿದಾರರು ಠೇವಣಿ ಮೇಲೆ ಹಕ್ಕು ಸಾಧಿಸಬಹುದು ಎಂದರು.
ದೇಶದಲ್ಲಿ ಉಜ್ಜೀವನ್ ಸಂಸ್ಥೆಯ 333 ಶಾಖೆಗಳಿದ್ದು, 17 ಲಕ್ಷ ಗ್ರಾಹಕರಿದ್ದಾರೆ. ರು.61 ಸಾವಿರ ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿದೆ. ಸದ್ಯ ರು.1500 ಕೋಟಿ ಸಾಲದ ರೂಪದಲ್ಲಿ ಗ್ರಾಹಕರ ಬಳಿ ಇದೆ ಎಂದು ತಮ್ಮ ಸಂಸ್ಥೆಯ ಬಗ್ಗೆ ಉಜ್ಜೀವನ್ ಸಂಸ್ಥೆಯ ಏರಿಯಾ ಮ್ಯಾನೇಜರ್ ರವಿಚಂದ್ರ ವಿವರಿಸಿದರು.
ಉಜ್ಜೀವನ್ ಸಂಸ್ಥೆ ನೀಡಿದ ಕೊಡುಗೆಗಳನ್ನು ವಿದ್ಯಾರ್ಥಿನಿಲಯದ ಪರವಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಸ್ವೀಕರಿಸಿದರು. ಬಿಎಸ್ಎಸ್ ಮಾರ್ಕೆಟಿಂಗ್ನ ಸೀತಾರಾಂ, ಉಜ್ಜೀವನ್ ಸಂಸ್ಥೆಯ ಕ್ವಾಲಿಟಿ ಮ್ಯಾನೇಜರ್ ಮಮತಾ, ಪ್ರಾಡಕ್ಟ್ ಮ್ಯಾನೇಜರ್ ಸುರಭಿ, ಸ್ಥಳೀಯ ಶಾಖೆಯ ಮುಖ್ಯಸ್ಥ ಶಿವರಾಜ್, ವಿದ್ಯಾರ್ಥಿ ನಿಲಯದ ಲಕ್ಷ್ಮೀ ಮುಂತಾದವರು ಹಾಜರಿದ್ದರು.