ಮರಳು ದಂಧೆಗೆ ಕಡಿವಾಣ: ಹೊಸ ಕಾರ್ಯತಂತ್ರ
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಜ. 29
ಮರಳು ಮಾಫಿಯಾ ಜತೆ ಕೈ ಜೋಡಿಸಿದ ಅಧಿಕಾರಿಗಳೆಲ್ಲರ ತಲೆಕಾಯ್ದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಹೋರಾಟಗಾರರ ಒತ್ತಡಕ್ಕೆ ಮಣಿದು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಹೊಸ ಕಾರ್ಯತಂತ್ರ ರೂಪಿಸುವ ವಾಗ್ದಾನ ನೀಡಿದ್ದಾರೆ.
ಜಿಲ್ಲಾಡಳಿತದಿಂದ ನಡೆದ ತಿಪ್ಪೆ ಸಾರಿಸುವ ಕೆಲಸದಿಂದ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧದ ಹೋರಾಟ ಅಂತ್ಯ ಕಾಣದಾಗಿದೆ. ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಚಳವಳಿ ಭುಗಿಲೇಳುವ ಸಾಧ್ಯತೆ ನಿಚ್ಚಳವಾಗಿದೆ.
ದೌಡಾಯಿಸಿದ ಡಿಸಿ: ಚನ್ನಪಟ್ಟಣ ತಾಲೂಕು ಕಚೇರಿ ಎದುರು ಸಿದ್ದರಾಮ ಹೆಗ್ಗಡೆ ನಡೆಸುತ್ತಿದ್ದ ಅಹೋರಾತ್ರಿ ಧರಣಿಗೆ ಬುಧವಾರ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರೈತ ನಾಯಕ ಕಡಿದಾಳ್ ಶಾಮಣ್ಣ ಸಹಿತ ಹಲವು ಹೋರಾಟಗಾರರು ಬೆಂಬಲ ಸೂಚಿಸಿ ಪಾಲ್ಗೊಂಡಿದ್ದರು. ನಿನ್ನೆಯಷ್ಟೇ ವಿಧಾನ ಮಂಡಲದಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧ ಚರ್ಚೆ ಹಿನ್ನೆಲೆಯಲ್ಲಿ ಸಿಎಂ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಅಧಿಕಾರಿಗಳ ದಂಡು ಸಮೇತ ದೌಡಾಯಿಸಿದ್ದರು. ಮನವಿ ಸ್ವೀಕರಿಸಿ, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಭೆ ನಡೆಸಿದ್ದರು.
ಹುಸಿಯಾದ ನಿರೀಕ್ಷೆ: ಚನ್ನಪಟ್ಟಣ ತಾಲೂಕಿನ ಪ್ರಮುಖ ಇಲಾಖೆಗಳ ಆಯಕಟ್ಟಿನ ಹುದ್ದೆಯಲ್ಲಿರುವ ಬಹುತೇಕರು ಮರಳು ದಂಧೆಕೋರರ ಜತೆ ಶಾಮೀಲಾಗಿರುವುದು ಜಗಜ್ಜಾಹೀರವಾಗಿದೆ. ಅವರ ಕುಮ್ಮಕ್ಕಿಲ್ಲದೆ ಮರಳು ದಂಧೆಗೆ ರಹದಾರಿ ಅಸಾಧ್ಯವೆನ್ನುವ ವಾಸ್ತವ ಸಂಗತಿ ಜಿಲ್ಲಾಧಿಕಾರಿಗೆ ತಿಳಿಯದೇ ಇರದು.
ಅಕ್ರಮ ಮರಳುಗಾರಿಕೆ ಚಳವಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳ ತಲೆ ದಂಡ ಆಗಬಹುದೆನ್ನುವ ನಿರೀಕ್ಷೆ ಇತ್ತು. ಈ ವಿಷಯದಲ್ಲಿ ಸ್ಥಳೀಯ ಶಾಸಕರ ಒತ್ತಡವೂ ಇತ್ತು. ಇಷ್ಟಾಗಿಯೂ ಜಿಲ್ಲಾಡಳಿತ ಮಾಫಿಯಾ ನಂಟಿಗೆ ಶ್ರೀರಕ್ಷೆಯಾಗಿದೆ.
ತನಿಖೆಗೆ ಅಸಮ್ಮತಿ: ಬಳ್ಳಾರಿ ಗಣಿಗಾರಿಕೆಗಿಂತಲೂ ಪ್ರಾಕಣತಿಕ ಅಸಮತೋಲನಕ್ಕೆ ಕಾರಣವಾಗಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು. ಈವರೆಗಿನ ಮರಳು ಲೂಟಿ ವಿರುದ್ಧ ಲೋಕಾಯುಕ್ತ ಇಲ್ಲವೇ ಸಿಬಿಐ ತನಿಖೆ ನಡೆಸಬೇಕೆನ್ನುವ ಎರಡು ಬೇಡಿಕೆಗಳಲ್ಲಿ ಜಿಲ್ಲಾಧಿಕಾರಿ ಒಂದಕ್ಕಷ್ಟೇ ಅಸ್ತು ಎಂದಿದ್ದಾರೆ.
ಮರಳುಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಭರವಸೆಯಿತ್ತ ಅವರು, ಉನ್ನತಾಧಿಕಾರ ಸಂಸ್ಥೆಯಿಂದ ಈವರೆಗಿನ ಎಲ್ಲ ಅಕ್ರಮಗಳ ತನಿಖೆ ಆಗಬೇಕೆನ್ನುವ ಕೂಗಿಗೆ ಸ್ಪಂದಿಸಲೇ ಇಲ್ಲ. ಈ ಪರಿಣಾಮ ಸಿದ್ದರಾಮ ಹೆಗ್ಗಡೆ ಹೋರಾಟ ಅಂತ್ಯ ಕಾಣದಾಯಿತು.
ಮಣಿಯದ ಹೆಗ್ಗಡೆ: ಅಕ್ರಮ ಮರಳುಗಾರಿಕೆ ತಡೆಗೆ 4 ದಿನದ ಗಡುವು ನೀಡಿ, ಹೋರಾಟ ಕೈಬಿಡುವಂತೆ ಧರಣಿಯಲ್ಲಿ ಪಾಲ್ಗೊಂಡ ಎಚ್.ಎಸ್.ದೊರೆಸ್ವಾಮಿ ಮನವೊಲಿಕೆಗೆ ಯತ್ನಿಸಿದರಾದರೂ ಮಣಿಯದ ಸಿದ್ದರಾಮ ಹೆಗ್ಗಡೆ ಧರಣಿ ಮುಂದುವರಿಕೆ ನಿರ್ಧಾರ ಪ್ರಕಟಿಸಿದರು.
ಅಧಿಕಾರಿಗಳು ಈ ಹಿಂದೆಯೂ ಕಣ್ಣೊರೆಸುವ ನಾಟಕವಾಡಿ ವಚನಭ್ರಷ್ಟರಾಗಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿ, ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವವರೆಗೂ ಹೋರಾಟ ಮುಂದುವರೆಸುವೆ ಎಂದು ದೊರೆಸ್ವಾಮಿ ಪಾದ ಮುಟ್ಟಿ ಹೆಗ್ಗಡೆ ಪ್ರಮಾಣ ಮಾಡಿದರು.
ಸಭೆಗೆ ಗೈರಾದ ಸೈನಿಕ
ಚನ್ನಪಟ್ಟಣದಲ್ಲಿ ಜಿಲ್ಲಾಡಳಿತದಿಂದ ಅಕ್ರಮ ಮರಳುಗಾರಿಕೆ ಸಂಬಂಧ ತರಾತುರಿಯಾಗಿ ಆಯೋಜಿಸಲಾಗಿದ್ದ ಸಭೆಗೆ ಸ್ವತಃ ಅಕ್ರಮ ಮರಳುಗಾರಿಕೆ ವಿರೋಧಿ ಹೋರಾಟಗಾರರೂ ಆಗಿರುವ ಸ್ಥಳೀಯ ಶಾಸಕ ಸಿ.ಪಿ.ಯೋಗೇಶ್ವರ್ ಗೈರಾಗಿದ್ದರು. ಸಭೆ ಸಂಬಂಧ ಬುಧವಾರ ಬೆಳಗ್ಗೆಯಷ್ಟೇ ತಹಸೀಲ್ದಾರ್ ಕಚೇರಿಯಿಂದ ಯೋಗೇಶ್ವರ್ ಅವರಿಗೆ ಮಾಹಿತಿ ರವಾನೆಯಾಗಿತ್ತು. ಅಷ್ಟರಲ್ಲಾಗಲೇ ಅವರು ಬೇರೆ ಕಡೆ ಪ್ರಯಾಣ ಬೆಳೆಸಿದ್ದರು. ತರಾತುರಿ ಏಕೆ ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣದಲ್ಲಿ ಶಾಸಕ ಮತ್ತು ತಹಸೀಲ್ದಾರ್ ಸಂಬಂಧ ಹಳಸಿದೆ. ಎತ್ತು ಏರಿಗೆ, ಕೋಣ ನೀರಿಗೆ ಎನ್ನುವ ಸ್ಥಿತಿ ಅಲ್ಲಿದೆ. ಅಕ್ರಮ ಮರಳುಗಾರಿಕೆ ನಿಯಂತ್ರಣಕ್ಕೆ ತೊಡೆ ತಟ್ಟಿ ಅಖಾಡಕ್ಕಿಳಿದಿರುವ ಶಾಸಕ ಯೋಗೇಶ್ವರ್ ಅವರಿಗೆ ತಾಲೂಕು ಆಡಳಿತವೇ ಅಡ್ಡಗಾಲಾಗಿದೆ.
ದಾಳಿಯ ಮಾಹಿತಿ ಪ್ರಚುರ
ಅಕ್ರಮ ಮರಳುಗಾರಿಕೆ ವಿರುದ್ಧ ನಡೆಯುವ ಕಾರ್ಯಾಚರಣೆ, ಜಪ್ತಿಯಾದ ಮರಳು, ವಸ್ತುಗಳು, ವಾಹನಗಳು ಮತ್ತು ಜರುಗಿಸಲಾದ ಕಾನೂನು ಕ್ರಮದ ದಿನವಹಿ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸುವುದಾಗಿ ಜಿಲ್ಲಾಧಿಕಾರಿ ಮತ್ತು ಅಕ್ರಮ ಮರಳುಗಾರಿಕೆ ವಿರುದ್ಧದ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ.ಡಿ.ಎಸ್.ವಿಶ್ವನಾಥ್ ಘೋಷಿಸಿದ್ದಾರೆ.
ಅಕ್ರಮ ಮರಳುಗಾರಿಕೆ ವಿರುದ್ಧದ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಇಲ್ಲಿವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಿತ್ತು. ಮರಳು ನೀತಿಯಲ್ಲಿ ಪ್ರಕರಣ ದಾಖಲಿಸುವ ಅಧಿಕಾರವನ್ನೀಗ ಕಂದಾಯ, ಲೋಕೋಪಯೋಗಿ, ಸಾರಿಗೆ, ಪೊಲೀಸ್ ಇಲಾಖೆಗೂ ವಿಸ್ತರಿಸಲಾಗಿದೆ ಎಂದರು. ಅಕ್ರಮ ಮರಳುಗಾರಿಕೆ ವಿರುದ್ಧದ ಕಾರ್ಯಾಚರಣೆಯನ್ನು ಹಗಲಲ್ಲಷ್ಟೇ ನಡೆಸಿದರೆ ಸಾಲದು. ರಾತ್ರಿ ಪಾಳಿಯಲ್ಲೂ ದಾಳಿ ನಡೆಸಬೇಕು. ಲೂಟಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಪ್ರಾಕೃತಿಕ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ಶೀಘ್ರವೇ ಮರಳು ದಂಧೆಗೆ ಅಂತ್ಯ ಹಾಡಲಾಗುವುದು ಎಂದು ತಿಳಿಸಿದರು.
ದಂಧೆಕೋರರ ಗಡಿಪಾರು
ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ ದಂಧೆಕೋರರ ವಿರುದ್ಧ ಸೆಕ್ಷನ್ 55(3) ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರನ್ನು ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗುವುದು ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಆಹದ್ ಹೇಳಿದರು. ಮರಳು ಮಾಫಿಯಾದ ವಿರುದ್ಧ ಸಾರ್ವಜನಿಕರು ಪೊಲೀಸ್ ಅಧಿಕಾರಿಗಳಿಗೆ ವಿಷಯ ಮುಟ್ಟಿಸಬೇಕು. ಆಗ ಲೂಟಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸಹಕಾರಿಯಾಗುತ್ತದೆ. ಯಾವುದೇ ಕಾರಣಕ್ಕೂ ಮಾಹಿತಿದಾರರ ಹೆಸರನ್ನು ಬಹಿರಂಗಪಡಿಸದೆ, ಗೌಪ್ಯವಾಗಿಡುತ್ತೇವೆ ಎಂದು ತಿಳಿಸಿದರು.