ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಳು ನಾಶಕ್ಕೆ ಕುಮ್ಮಕ್ಕು ನೀಡಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ವಿಶ್ವನಾಥ್

Rashmi Kasaragodu
Updated On : 30 Jan 2014, 2:03 am

ಚನ್ನಪಟ್ಟಣ: ಮರಳು ನಾಶಕ್ಕೆ ಯಾರು ಕುಮ್ಮಕ್ಕು ನೀಡುತ್ತಾರೋ ಅವರು ಮೊದಲು ನಿಮ್ಮ ಹೆಂಡತಿ ಮಕ್ಕಳನ್ನು  ನೆನೆಸಿಕೊಳ್ಳಿ, ನೀವು ಪರಿಸರ ನಾಶಕ್ಕೆ ಬೆಂಬಲ ನೀಡಿದರೆ ನಿಮ್ಮ ಮನೆಗೆ ಒಳ್ಳೆಯದಾಗುವುದಿಲ್ಲ. ಇದು  ಅಕ್ರಮ ಮರಳು ಗಣಿಗಾರಿಕೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ನೀಡಿದ ಎಚ್ಚರಿಕೆ.
ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಷೇಧದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ  ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇದು ಕೇವಲ ಸಭೆಯಲ್ಲ ಮರಳು ಗಣಿಗಾರಿಕೆಯನ್ನು ತಾಲೂಕಿನಲ್ಲಿ ನಿಯಂತ್ರಿಸುವ ಸಂಕಲ್ಪ ಎಂದು ಸ್ಪಷ್ಟಪಡಿಸಿದರು.
ಎಸಿ ಅಧ್ಯಕ್ಷತೆಯಲ್ಲಿ ಸಮಿತಿ: ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವ ಸಂಬಂಧ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು, ಈ ಸಮಿತಿಯಲ್ಲಿ ಪೊಲೀಸ್, ಗಣಿ ಮತ್ತು ಭೂವಿಜ್ಞಾನ, ಕಂದಾಯ, ಲೋಕೋಪಯೋಗಿ ಸೇರಿದಂತೆ 9 ವಿವಿಧ ಇಲಾಖಾ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಈ ತಾಲೂಕಿನಲ್ಲಿ ಯಾವ ಯಾವ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಪಟ್ಟಿ ಮಾಡಲಾಗಿದ್ದು ಈ ಗ್ರಾಮಗಳ ಪಿಡಿಒ, ಗ್ರಾಮಲೆಕ್ಕಾಧಿಕಾರಿ ಮತ್ತು ಸ್ಥಳೀಯ ಪೊಲೀಸರಿಗೆನಿಗಾ ವಹಿಸುವಂತೆ ಸೂಚಿಸಲಾಗುವುದು,  ಮರಳುಗಣಿಗಾರಿಕೆ ವಿರುದ್ಧ ಕ್ರಮ ತೆಗೆದು ಕೊಳ್ಳದಿದ್ದರೆ  ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಇಗ್ಗಲೂರು ಜಲಾಶಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ನಾಳೆಯೇ ಬೋಟ್ ತರಿಸಿ ಕಾರ್ಯಾಚರಣೆ ನಡೆಸಲಾಗುವುದು. ಇಗ್ಗಲೂರು ಜಲಾಶಯಕ್ಕೆ  ಸಿಸಿಟಿವಿ ಅಳವಡಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು ನಿಕ್ಷೇಪ ಕಳವಾದರೆ ಸಂಬಂಧಿಸಿದ ಅಧಿಕಾರಿಗಳು ದೂರು ನೀಡಬೇಕೆಂದು ಆಗ್ರಹಿಸಿದರು.
ಸ್ಥಳೀಯ ಬಳಕೆಗೆ ನಿಕ್ಷೇಪ ಹುಡುಕಿ: ಸ್ಥಳೀಯ ಬಳಕೆಗೆ ಮರಳಿನ ಅಗತ್ಯತೆ ಇದ್ದು ಇದನ್ನು ಹುಡುಕುವ ಕಾರ್ಯ ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ, ನೀರಾವರಿ ಇಲಾಖೆಯದ್ದಾಗಿದ್ದು ಸದ್ಯದಲ್ಲೇ ನಿಕ್ಷೇಪ ಹುಡುಕಿ ಸರ್ಕಾರಕ್ಕೆ ವರದಿ ಕಳುಹಿಸಿ. ಹೀಗೆ ದೊರೆತ ನಿಕ್ಷೇಪವನ್ನು ಯಾವುದೋ ಖಾಸಗಿ ವ್ಯಕ್ತಿಗಳಿಗೆ ನೀಡದೆ ಸರ್ಕಾರವೇ ಕಡು ಬಡವರಿಗೆ ನ್ಯಾಯೋಚಿತ ಬೆಲೆಗೆ ಮಾರಾಟ ಮಾಡಬೇಕೆಂದು ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಬ್ದುಲ್ ಆಹದ್, ಎಎಸ್ಪಿ ಕುಲದೀಪ್ ಸಿಂಗ್ ಜೈನ್, ಉಪವಿಭಾಗಾಧಿಕಾರಿ ಸಿದ್ದಪ್ಪ ಉಪಸ್ಥಿತರಿದ್ದರು. ರೈತಸಂಘದ ಸಿ.ಪುಟ್ಟಸ್ವಾಮಿ, ಕೆ.ಮಲ್ಲಯ್ಯ, ಎಂ.ರಾಮು, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅನುಸೂಯಮ್ಮ, ಪಿ.ಜೆ.ಗೋವಿಂದರಾಜು, ರಾಂಪುರ ಧರಣೀಶ್ ಇನ್ನೂ ಮುಂತಾದವರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement