ಸರ್ಜಾಪುರದಲ್ಲಿ ರೈತರ ಹಬ್ಬ
ಆನೇಕಲ್ಲು; ತಾಲೂಕಿನ ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತ ಇರುವ ರೈತ ಹಬ್ಬ ಕಾರ್ಯಕ್ರಮ ಸರ್ಜಾಪುರದಲ್ಲಿ ಅದ್ಧೂರಿಯಿಂದ ಜರುಗಿತು.
ಸುತ್ತಮುತ್ತಲ ನೂರಾರು ಹಳ್ಳಿಗಳ ರೈತರು, ರೈತ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ರೈತ ಹಬ್ಬದಲ್ಲಿ ಪಾಲ್ಗೊಂಡು ವಿವಿಧ ಮಾಹಿತಿ ಪಡೆದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಮ್ಮ ಶ್ರೀರಾಮುಲು ಮಾತನಾಡಿ ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯುವಂತಹ ಬೆಳೆ ಬೆಳೆಯಬೇಕೆಂದರು. ರಾಜ್ಯ ಸರ್ಕಾರ ಕೃಷಿ ಉಪಕರಣಗಳ ಮೇಲೆ ವಿಶೇಷ ಸೋಡಿ ನೀಡುತ್ತಿದೆ. ಮಿನಿ ಟ್ರ್ಯಾಕ್ಟರ್, ಕಲ್ಟಿವೇಟರ್, ಮಲ್ಟಿ ಉಪಯೋಗಿ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇಲಾಖೆ ನೀಡುವ ಸಬ್ಸಿಡಿ ಸೌಲಭ್ಯ ಪಡೆಯಬೇಕೆಂದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಮುರಳಿ ಮಾತನಾಡಿ ಪಶು ಸಂಗೋಪನೆ ರೈತರ ಪಾಲಿಗೆ ದಿನ ನಿತ್ಯ ಲಾಭ ನೀಡುವ ವೃತ್ತಿಯಾಗಿದೆ. ರಾಜ್ಯ ಸರ್ಕಾರ ರು. 4 ಸಹಾಯ ಧನ ನೀಡುವ ಮೂಲಕ ಪ್ರೋತ್ಸಾಹ ಹಾಗೂ ರಾಸು ಪರೀಕ್ಷೆ, ವಿಮೆ, ಮೇವು ಮುಂತಾದವುಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದ್ದು ಹಾಲು ಕರೆಯುವ ಯಂತ್ರ, ಮೇವು ಕಟಾವು ಯಂತ್ರ ಉಪಯೋಗಿಸಿಕೊಂಡು ಶುದ್ಧ ಹಾಲು ಉತ್ಪಾದನೆ ಮಾಡಿ ಎಂದರು.
ಬೆಂಗಳೂರು ನಗರ ಜಿಪಂ ಅಧ್ಯಕ್ಷೆ ಇಂದಿರಾ ನಾಗರಾಜ್ ಮಾತನಾಡಿ ದಕ್ಷಿಣ ಪಿನಾಕಿನ ನದಿ ಇಲ್ಲಿ ಹಾದು ಹೋಗುತ್ತದೆ. ಎಂ.ಪಿ. ಕೇಶವಮೂರ್ತಿ ಅವರು ಸಚಿವರಾಗಿದ್ದ ಅವಧಿಯಲ್ಲಿ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಂತರದ 17 ವರ್ಷಗಳ ಅವಧಿಯಲ್ಲಿ ಯಾವುದೇ ಕೃಷಿ ಪೋಷಣೆ ಚಟುವಟಿಕೆ ತಾಲೂಕಿನಲ್ಲಿ ನಡೆಯಲಿಲ್ಲ. ಬೆಳ್ಳಂಡೂರು ಕೆರೆಯಿಂದ ಬಳಸಿದ ನೀರು ವರ್ಷದ 365 ದಿನಗಳೂ ಹರಿಯುತ್ತಿದ್ದು ನೆರೆಯ ತಮಿಳುನಾಡಿನ ಹೊಸೂರಿಗೆ ತಲುಪುತ್ತದೆ. ಸರ್ಕಾರದ ಮಟ್ಟದಲ್ಲಿ ಬಳಸಿ ವ್ಯರ್ಥವಾಗಿ ಹರಿಯವು ನೀರಿನ ಸಮರ್ಪಕ ಬಳಕೆಗೆ ಪ್ರಸ್ತಾವನೆ ಪಡೆದು ಕೃಷಿ ಆಧಾರಿತ ಭೂಮಿ ಇರುವ ಸರ್ಜಾಪುರ ಭಾಗದಲ್ಲಿ ಹರಿಸುವ ಯೋಜನೆಗೆ ಮರ ಚಾಲನೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಇಒ ಡಾ. ವೀರಭದ್ರಪ್ಪ, ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ತಾಪಂ ಸದಸ್ಯ ರಮೇಶ್, ಗ್ರಾಪಂ ಅಧ್ಯಕ್ಷ ಶಂಭಯ್ಯ ಸೇರಿದಂತೆ ನೂರಾರು ಪ್ರಮುಖರು ಭಾಗವಹಿಸಿದ್ದರು.