ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೋರಾಟಕ್ಕೆ ಹುರುಪು ನೀಡಿದ ದೊರೆಸ್ವಾಮಿ, ಕಡಿದಾಳ್ ಶಾಮಣ್ಣ

Rashmi Kasaragodu
Updated On : 30 Jan 2014, 2:03 am

ಚನ್ನಪಟ್ಟಣ: ಕಳೆದ 10 ದಿನಗಳಿಂದ ಸಿದ್ದರಾಮ ಹೆಗ್ಗೆಡೆ ನಡೆಸುತ್ತಿರುವ ಅಕ್ರಮ ಮರಳು ಗಣಿಗಾರಿಕೆ ವಿರೋಧಿ ಹೋರಾಟದಲ್ಲಿ  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರೈತಸಂಘದ ಹಿರಿಯ ಮುಖಂಡ ಕಡಿದಾಳ್ ಶಾಮಣ್ಣ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಹೊಸ ಹುರುಪು ತುಂಬಿದರು.
ಅನಾರೋಗ್ಯದ ನಡುವೆಯೂ ಚಳವಳಿಗೆ ದುಮುಕಿದ ಇಬ್ಬರು ಹಿರಿಯ ಹೋರಾಟಗಾರರು ಪರಿಸರದ ಬಗೆಗಿನ ಕಾಳಜಿಯೊಂದಿಗೆ ಹಮ್ಮಿ ಕೊಂಡಿರುವ ಚಳವಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ನಿಸರ್ಗದ ಸಂಪತ್ತನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ ಎಂದು ಕಿಡಿಕಾರಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ ಸರ್ಕಾರವನ್ನು ಗಣಿಲಾಬಿ ನಡೆಸುತ್ತಿದೆ. ಇಂತಹ ವ್ಯವಸ್ಥೆ ನಿಜಕ್ಕೂ ನಾಚಿಗೆಗೇಡಿನ ಸಂಗತಿಯಾಗಿದ್ದು, ಈ ಹೊರಾಟಕ್ಕೆ ತಾಲೂಕಿನ ಜನತೆ ಸ್ಪಂದಿಸದ ಹೊರತು ಹೋರಾಟಕ್ಕೆ ನ್ಯಾಯ ದೊರಕುವುದಿಲ್ಲ ಎಂದು ಕಿಡಿಕಾರಿದರು. ಇದುವರೆಗೆ ನಡೆದಿರುವ ಮರಳು ಲೂಟಿಗೆ ಅಧಿಕಾರಿ ಮತ್ತು ಸರ್ಕಾರವೇ ಹೊಣೆಯಾಗಿದ್ದು ಇನ್ನಾದರೂ ತಪ್ಪನ್ನು ತಿದ್ದುಕೊಳ್ಳುವ ಕೆಲಸ ಮಾಡ ಬೇಕೆಂದು ಆಗ್ರಹಿಸಿದರು.
ಲೋಕಾಯುಕ್ತ ತನಿಖೆ ನಡೆಯಲಿ: ನಿಷೇಧದ ನಡುವೆಯೂ 14 ವರ್ಷಗಳಿಂದ ನಡೆದಿರುವ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಲೇ ಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸ ಬೇಕು ಎಂದು ಆಗ್ರಹಿಸಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನದಿಗಳನ್ನು ಸಾಯಿಸಿದ್ದಾರೆ ಎಂದು ಹೇಳಿದರು.
ಕಡಿದಾಳ್ ಆಕ್ರೋಶ: ಸಭೆಯಲ್ಲಿ ಮಾತನಾಡಿದ ಹಿರಿಯ ಸಮಾಜವಾದಿ ಕಡಿದಾಳ್ ಶಾಮಣ್ಣ, ಮರಳು ದರೋಡೆ ವಿರುದ್ಧ ಗಟ್ಟಿ ಹೋರಾಟ ರೂಪುಗೊಳ್ಳುತ್ತಿದ್ದು ಈ ನೆಲದ ಕಾನೂನನ್ನು ಕಾಪಾಡಿ ಎಂದು ಹೋರಾಟ ನಡೆಸುತ್ತಿರುವ ವ್ಯಕ್ತಿಯ ಸಮಸ್ಯೆಗಳನ್ನು ಆಲಿಸದ ಅಂತಃಕರಣ ಇಲ್ಲದ ಅಧಿಕಾರಿಗಳ ಕ್ರಮ ನಿಜಕ್ಕೂ ಖಂಡನಾರ್ಹ ಎಂದು ಕಿಡಿಕಾರಿದರು. ನಿಮ್ಮ ಕೈಯಲ್ಲಿ ಮರಳು ದಂಧೆ ತಡೆಯಲಾಗದಿದ್ದರೆ ನೀವು ನಿಶಕ್ತರು ಎಂದು ಒಪ್ಪಿಕೊಳ್ಳಿ. ನಾವೇ ದಂಧೆಯನ್ನು ನಿಯಂತ್ರಿಸುತ್ತೇವೆ. ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮರಳು ಗಣಿಗಾರಿಕೆ ವಿರುದ್ಧದ ಚಳವಳಿಯಲ್ಲಿ ಪಾಲ್ಗೊಂಡು ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರ ಸಿಂ.ಲಿಂ ನಾಗರಾಜು, ರೈತಸಂಘದ ಎಂ.ರಾಮು, ಕೆ. ಮಲ್ಲಯ್ಯ, ಲಕ್ಷ್ಮಣಸ್ವಾಮಿ, ಪಿ.ಜೆ.ಗೋವಿಂದರಾಜು, ಬಿ.ಟಿ.ನಾಗೇಶ್, ತಿಮ್ಮೇಶ್ ಪ್ರಭು, ಕರವೇ ತಾಲೂಕು ಅಧ್ಯಕ್ಷ ಸಾಗರ್, ರೇವಣ್ಣ, ಕಸಾಪ ನಿಕಟ ಪೂರ್ವ ಅಧ್ಯಕ್ಷ ತೋಟದ ಮನೆ ಕಣಷ್ಣೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement