ದಡಾರ ಕಾಯಿಲೆ ತೊಡೆಯಲು ಆಂದೋಲನ ಕಾರ್ಯಕ್ರಮ
ರಾಮನಗರ: ಇರುಳು ಕುರುಡುತನ ಹಾಗೂ ದಡಾರ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಲುವಾಗಿ 60 ದಿನಗಳ ಎ ಅನ್ನಾಂಗ ಪೂರಕ ಆಂದೋಲನ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಘುನಾಥ್ ತಿಳಿಸಿದರು.
ಪಲ್ಸ್ ಪೋಲಿಯೊ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಸಾಮೂಹಿಕ ಲಸಿಕೆ ಕಾರ್ಯಕ್ರಮ, ಆರೋಗ್ಯ ಶಿಬಿರಗಳ ಮೂಲಕ ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ಆರೋಗ್ಯ ಇಲಾಖೆ ತೊಡಗಿಕೊಂಡಿದೆ. ಜಿಲ್ಲಾ ವ್ಯಾಪ್ತಿಯ 6 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಪೋಷಕರು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಪೋಲಿಯೊ ರೋಗವನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನಗೊಳಿಸಿದಂತೆ ಇರುಳು ಕುರುಡುತನವನ್ನು ಹೋಗಲಾಡಿಸುವ ಪ್ರಯತ್ನ ಇದಾಗಿದ್ದು, ಜಿಲ್ಲೆಯಲ್ಲಿರುವ 1525 ಅಂಗನವಾಡಿ ಕೇಂದ್ರಗಳು, 240 ಉಪ ಆರೋಗ್ಯ ಕೇಂದ್ರಗಳು, 63 ಪ್ರಾಥಮಿಕ ಆರೋಗ್ಯ ಕೇಂದ್ರಗಳು. 4 ಸಮುದಾಯ ಕೇಂದ್ರಗಳು, 3 ತಾಲೂಕು ಆಸ್ಪತ್ರೆ ಹಾಗೂ ಒಂದು ಜಿಲ್ಲಾ ಆಸ್ಪತ್ರೆಯಲ್ಲಿ ಎ ಅನ್ನಾಂಗ ದ್ರಾವಣ ನೀಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಮಾಗಡಿಯಲ್ಲಿ 2 ದಡಾರ ಪ್ರಕರಣಗಳು ವರದಿಯಾಗಿದ್ದು, ಸಕಾಲಕ್ಕೆ ಎ ಅನ್ನಾಂಗ ನೀಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಇರುಳುಗಣ್ಣಿನ ಚಿಕಿತ್ಸೆಗೆ ಹಾಗೂ ದಡಾರದ ಪ್ರತಿಕೂಲ ಪರಿಣಾಮಗಳನ್ನು ನಿಯಂತ್ರಿಸಲು ಎ ಅನ್ನಾಂಗವು ಅತ್ಯವಶ್ಯಕವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಪ್ರತಿ 6 ತಿಂಗಳಿಗೊಮ್ಮೆ ಎ ಅನ್ನಾಂಗ ದ್ರಾವಣವನ್ನು ತಪ್ಪದೆ ಕೊಡಿಸುವಂತೆ ಮನವಿ ಮಾಡಿದರು.
6 ತಿಂಗಳಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪ್ರತಿ 6 ತಿಂಗಳಿಗೊಮ್ಮೆ ಎ ಅನ್ನಾಂಗವನ್ನು ನೀಡಬೇಕಿದ್ದು, ಜಿಲ್ಲೆಯಲ್ಲಿ 1.10 ಲಕ್ಷ ಮಕ್ಕಳಿಗೆ ಎ ಅನ್ನಾಂಗ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 3 ಸಾವಿರ ಬಾಟಲ್ ಎ ಅನ್ನಾಂಗ ಜಿಲ್ಲೆಗೆ ಸರಬರಾಜಾಗಿದೆ. ಇದರ ಜತೆಗೆ 1.18 ಲಕ್ಷ ಜಂತು ಹುಳು ನಿಯಂತ್ರಣದ ಆಲ್ಬೆಂಡಜೋಲ್ ಮಾತ್ರೆ ಸರಬರಾಜಾಗಿದ್ದು, ಇವುಗಳನ್ನು ಮಕ್ಕಳಿಗೆ ಒದಗಿಸಲಾಗುವುದು ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಸುಲೋಚನಾ ತಿಳಿಸಿದರು. ಮಕ್ಕಳಿಗೆ ನೀಡುವ ಲಸಿಕೆಗಳನ್ನು ಶಿತಲೀಕರಣ ವ್ಯವಸ್ಥೆಯಲ್ಲಿಟ್ಟು ನೀಡಬೇಕಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ಸಂಗ್ರಹಿಸಲು ಉತ್ಕೃಷ್ಟ ವ್ಯವಸ್ಥೆ ಇದ್ದು, ಇದರಿಂದ ಲಸಿಕೆಗಳ ಗುಣಮಟ್ಟ ಹಾಳಾಗುವುದಿಲ್ಲ. ಶೇ. 60 ರಷ್ಟು ಮಂದಿ ಮಾತ್ರ ಸರ್ಕಾರಿ ಆಸ್ಪತ್ರೆಗಳ ಲಸಿಕಾ ಕಾರ್ಯಕ್ರಮದ ಸೌಕರ್ಯವನ್ನು ಬಳಸುತ್ತಿದ್ದು, ಎಲ್ಲಾ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಲಸಿಕೆಗಳನ್ನೇ ಬಳಸಬೇಕು. ಇದರಿಂದ ಮಕ್ಕಳ ರೋಗ ನಿರೋಧಕ ಶಕ್ತಿಯು ಉತ್ತಮವಾಗಿರುತ್ತದೆ ಎಂದರು.