ನೀರಿನ ಸಮಸ್ಯೆ ಆದ್ಯತೆ ಮೇಲೆ ಬಗೆಹರಿಸಿ: ಸುರೇಶ್
ಕನಕಪುರ: ಹಲವಾರು ವರ್ಷಗಳಿಂದ ಬರಪೀಡಿತವಾಗಿರುವ ಕನಕಪುರ ತಾಲೂಕಿನಲ್ಲಿ ಮಳೆಯ ತೀವ್ರ ಕೊರತೆಯಿಂದ ಅಂತರ್ಜಲ ಪ್ರಮಾಣ ಅಪಾಯಕಾರಿಯಾಗಿ ಕುಸಿದಿದೆ. ಅಧಿಕಾರಿಗಳು ತಾಲೂಕಿನಲ್ಲಿ ನೀರಿನ ಸಮಸ್ಯೆಯನ್ನು ಪ್ರಥಮ ಆದ್ಯತೆಯ ಮೇಲೆ ಬಗೆಹರಿಸಬೇಕು ಎಂದು ಬೆಂಗ್ರಾ ಲೋಕಸಭಾ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಅವರು ರಾಮನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಸೇರಿದ ಹಾರೋಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ಹಾಗೂ ಗ್ರಾಮಸಂದರ್ಶನಗಳನ್ನು ನಡೆಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಮುಖಂಡರಾದ ಮರಿದೇವರು, ಎಸ್.ರವಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿಪಂ ಸದಸ್ಯರಾದ ಇಕ್ಬಾಲ್ ಹುಸೇನ್, ಸೌಭಾಗ್ಯ, ಗೀತಾ ಈಶ್ವರ್, ವೆಂಕಟೇಶಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯದೇವ್, ದಿಲೀಪ್,ಸ ಬ್ದರ್ಹುಸೇನ್, ತಾಪಂ ಅಧ್ಯಕ್ಷೆ ಸಿದ್ಧಿಕಾಪರ್ವೀನ್, ಎಚ್.ಕೆ.ನಾಗರಾಜ್, ಎಂ.ಎನ್.ನಾಗರಾಜ್, ಹೊಸಕೋಟೆ ಪುರುಷೋತ್ತಮ್ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಹೋಬಳಿಯ ವ್ಯಾಪ್ತಿಯಲ್ಲಿ 160 ಹಾಗೂ ಮರಳವಾಡಿ ಹೋಬಳಿಯ 300 ಮಂದಿಗೆ ವೃದ್ಧಾಪ್ಯವೇತನ ವಿತರಣೆಯನ್ನು ಡಿ.ಕೆ.ಸುರೇಶ್ ನೆರವೇರಿಸಿದರು.
ಕಾವೇರಿ ನೀರು ಸರಬರಾಜು ಯೋಜನೆಯ ಐದನೇ ಹಂತದಲ್ಲಿ ಲಭ್ಯ 10 ಟಿಎಂಸಿ ನೀರಿನಲ್ಲಿ ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ 2 ಟಿಎಂಸಿ ನೀರು ಸಿಗಲಿದ್ದು ರಾಮನಗರ ಕ್ಷೇತ್ರದ ಬಿಡದಿ, ಕೈಲಾಂಚ ಹಾಗೂ ಹಾರೋಹಳ್ಳಿ ಹೋಬಳಿಗಳಿಗೆ ಕಾವೇರಿ ನೀರು ಸರಬರುಜು ಮಾಡಲಾಗುವುದು ಎಂದುಹೇಳಿದರು. ಹಾರೋಹಳ್ಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಯಾಂತ್ರೀಕೃತ ಕಸಾಯಿಖಾನೆ ಸ್ಥಾಪನೆಗೆ ತಮ್ಮ ವಿರೋಧವಿದೆ, ಜನರ ಆರೋಗ್ಯ, ನೈರ್ಮಲ್ಯಗಳನ್ನು ಹಾಳು ಮಾಡುವ ಯೋಜನೆ ನಮಗೆ ಬೇಡ ಎಂದು ಖಡಾಖಂಡಿತವಾಗಿ ಹೇಳಿದರು.