ಪಡಿತರ ಖಾತ್ರಿ ಯೋಜನೆ ನಾಳೆಯಿಂದ ಜಾರಿ
ರಾಮನಗರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಡಿತರ ಖಾತ್ರಿ ಯೋಜನೆಯು ಫೆ.1 ರಿಂದ ಜಿಲ್ಯಾದ್ಯಂತ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಜಾರಿಗೊಳ್ಳಲಿದೆ. ಈ ಯೋಜನೆಯನ್ವಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನೊಳಗೆ ಬೆಳಗ್ಗೆ 8 ರಿಂದ ಸಂಜೆ ವರೆಗೆ (ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ) ಕಾರ್ಯನಿರ್ವಹಿಸಬೇಕಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿಗೆ ರು.1ರಂತೆ ಒಬ್ಬ ಸದಸ್ಯರಿಗೆ 8 ಕೆಜಿ ಅಕ್ಕಿ, 2 ಕೆಜಿ ಗೋಧಿ, ಇಬ್ಬರಿಗೆ 16 ಕೆಜಿ ಅಕ್ಕಿ, 4 ಕೆಜಿ ಗೋಧಿ, ಹಾಗೂ ಮೂರಕ್ಕಿಂತ ಮೇಲ್ಪಟ್ಟ ಸದಸ್ಯರಿಗೆ 24 ಕೆಜಿ ಅಕ್ಕಿ, 6 ಕೆಜಿ ಗೋಧಿ, 1 ಕೆಜಿ ಸಕ್ಕರೆ ವಿತರಿಸಬೇಕು. ಕಡ್ಡಾಯವಾಗಿ ರಶೀದಿ ನೀಡಿ ಬಿಲ್ ಪುಸ್ತಕದಲ್ಲಿ ಕಾರ್ಡುದಾರರ ರುಜು ಪಡೆಯಬೇಕಿರುತ್ತದೆ. ಈ ಸಂಬಂಧ ಗ್ರಾ.ಪಂ. ಮಟ್ಟದಲ್ಲಿ ಪಂಚಾಯಿತಿವಾರು ನೋಡಲ್ ಅಧಿಕಾರಿಗಳನ್ನು ತಾಲೂಕು ಮಟ್ಟದಲ್ಲಿ ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪಡಿತರ ಖಾತ್ರಿ ಯೋಜನೆಯಡಿ ಅಕ್ಕಿ, ಗೋಧಿ ಮತ್ತು ಸಕ್ಕರೆಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪಡಿತರ ಚೀಟಿದಾರರು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ತಿಳಿಸಿದ್ದಾರೆ.
ಇಂದು ಕಾನೂನು ಅರಿವು ಕಾರ್ಯಕ್ರಮ
ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜ.31ರ ಸಂಜೆ 5.30ಕ್ಕೆ ತಾಲೂಕಿನ ಚೌಡೇಶ್ವರಿಹಳ್ಳಿ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲಲ್ನ್ಯಾಯಾಧೀಶ ಎಸ್.ಎಚ್.ಹೊಸಗೌಡರ ಉದ್ಘಾಟಿಸುವರು. ಶ್ಯಾನುಭೋಗನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಶಂಭೇಗೌಡ ಅಧ್ಯಕ್ಷತೆ ವಹಿಸುವರು. ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್, ಉಪಾಧ್ಯಕ್ಷ ಸಿ.ಚಿಕ್ಕಪ್ಪಾಜಿ ಭಾಗವಹಿಸುವರು. ಕೌಟುಂಬಿಕ ದೌರ್ಜನ್ಯ ಕಾಯ್ದೆ 2005 ಕುರಿತು ವಕೀಲ ಟಿ.ಎಂ.ಚಂದ್ರಶೇಖರ್ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಕುರಿತು ವಕೀಲ ಎಸ್. ಕಾಂತರಾಜು ಉಪನ್ಯಾಸ ನೀಡುವರು.
ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ
ರಾಮನಗರ: ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳ ತಂಡ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ, ಕ್ಷೀರ ಭಾಗ್ಯ ಯೋಜನೆ ಅನುಷ್ಠಾನ, ದಾಖಲೆಗಳ ನಿರ್ವಹಣೆ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಪ್ರಮಾಣ ಹಾಗೂ ಗುಣಮಟ್ಟ, ಮೂಲಭೂತ ಸೌಲಭ್ಯಗಳು, ಸ್ವಚ್ಛತೆ ಬಗ್ಗೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ವಿವಿಧ ರಾಜ್ಯಗಳ ನಿರ್ದೇಶಕರು, ಸಹ ನಿರ್ದೇಶಕರಿದ್ದ ಅಧಿಕಾರಿಗಳ ಎರಡು ತಂಡಗಳು ತಾಲೂಕಿನ ಮಾಯಗಾನಹಳ್ಳಿ ಹಾಗೂ ಚನ್ನಪಟ್ಟಣದ ಬೈರಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಶಿಕ್ಷಣ ಇಲಾಖೆ ಅಧಿಕಾರಿಗಳು ನಿಯೋಗಕ್ಕೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಸರ್ಕಾರವು ಕಲ್ಪಿಸಿರುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆದ ತಂಡವು, ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೆ ವಿದ್ಯಾರ್ಥಿಗಳ ಜತೆ ಬಿಸಿಯೂಟ ಸೇವಿಸಿ ಹರ್ಷ ವ್ಯಕ್ತಪಡಿಸಿದರು ಎಂದು ಜಿ.ಪಂ. ಬಿಸಿಯೂಟ ಯೋಜನೆ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.