ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಿ

Rashmi Kasaragodu
Updated On : 31 Jan 2014, 1:52 am

ಕ.ಪ್ರ.ವಾರ್ತೆ  ರಾಮನಗರ  ಜ.30
ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಿವೆ. ಪಶು ವೈದ್ಯರು ತಮಗೆ ಎಲ್ಲವೂ ಗೊತ್ತಿದೆ ಎಂದು ಬೀಗುವ ಬದಲು ಸಂಶೋಧನೆಗಳ ಬೆನ್ನು ಹತ್ತಿ, ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಕರೆ ನೀಡಿದರು.
ಜಿ.ಪಂ., ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪಶುವೈದ್ಯರ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೈನೋದ್ಯಮ ಅವಲಂಬಿತ ರೈತಾಪಿ ಸಮುದಾಯದ ಬದುಕು ಪಶು ವೈದ್ಯರನ್ನು ಅವಲಂಬಿಸಿದೆ. ಆಯಾ ಪ್ರದೇಶದ ಹವಾಮಾನ, ನೀರು, ಲವಣಾಂಶ ಇತ್ಯಾದಿಗಳಿಗೆ ಅನುಗುಣವಾಗಿ ಪಶು ಆಹಾರವನ್ನು ಶಿಫಾರಸು ಮಾಡಿ, ಜಾನುವಾರುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡಬೇಕು ಎಂದು ಅವರು ಸಲಹೆ ನೀಡಿದರು.  
ನಿಯಂತ್ರಣಕ್ಕೆ ಮುಂದಾಗಿ: ಪಶು ಪಾಲನೆ ಮತ್ತು ಹೈನೋದ್ಯಮವು ಲಾಭದಾಯಕವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಕಾಡಿದ ಕಾಲುಬಾಯಿ ಜ್ವರಬಾಧೆಯಿಂದ ರೈತರ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಅಗತ್ಯ ಔಷಧೋಪಚಾರ ಮತ್ತು ಮುಂಜಾಗ್ರತಾ ಲಸಿಕೆ ನೀಡುವ ಮೂಲಕ ಶೇ. 100ರಷ್ಟು ಪ್ರಮಾಣದಲ್ಲಿ ರೋಗ ತಡೆಗೆ ಮುಂದಾಗಿ ಎಂದು ವಿಶ್ವನಾಥ್ ಸೂಚಿಸಿದರು.
ಮುನ್ನೆಚ್ಚರಿಕೆ ವಹಿಸಿ: ಪಶು ವೈದ್ಯರು ಕಾಟಾಚಾರದ ಕೆಲಸದ ಬದಲು ವೃತ್ತಿಯಲ್ಲಿ ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ರೋಗ ಬಂದ ನಂತರ ಚಿಕಿತ್ಸೆ ನೀಡುವುದರ ಬದಲು ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ತಾಂತ್ರಿಕ ಕಾರ್ಯಾಗಾರ ಉಪಯುಕ್ತವಾಗಿದ್ದು, ಇಲ್ಲಿ ಪಡೆದುಕೊಂಡ ಮಾಹಿತಿ ರೈತರಿಗೆ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು.  
ರೈತರ ಆಶಾಕಿರಣ: ಕೃಷಿ ಆಧಾರಿತವಾದ ನಮ್ಮ ದೇಶದಲ್ಲಿ ಹೈನೋದ್ಯಮವು ರೈತರ ಪಾಲಿನ ಆಶಾಕಿರಣವಾಗಿದೆ. ಡಾ.ಕುರಿಯನ್ ಅವರ ಪ್ರಯತ್ನದ ಫಲವಾಗಿ ದೇಶದಲ್ಲಿ ಈಗ ಕ್ಷೀರಕ್ರಾಂತಿಯೇ ನಡೆದಿದೆ. ಪಶು ಸಂಗೋಪನೆಯಲ್ಲಿರುವ ಸಮಸ್ಯೆಗಳು, ಜಾನುವಾರುಗಳನ್ನು ಕಾಡುವ ರೋಗ ನಿವಾರಣೆಗೆ ಪಶು ವೈದ್ಯರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ಹೇಳಿದರು.  
ಮತ್ತೆ ಕಾಡಿದೆ ಆತಂಕ: ರಾಜ್ಯದಲ್ಲಿ ಕಾಲುಬಾಯಿ ಜ್ವರಕ್ಕೆ 15 ಸಾವಿರಕ್ಕೂ ಹೆಚ್ಚು ರಾಸುಗಳು ಬಲಿಯಾಗಿವೆ. ಕೆಲ ಪ್ರದೇಶಗಳಲ್ಲಿನ್ನೂ ರೋಗ ನಿವಾರಣೆ ಆಗಿಲ್ಲ. ಮುಂಜಾಗ್ರತಾ ಲಸಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ರೋಗ ನಿಯಂತ್ರಣಕ್ಕೆ ಮುಂದಾಗುವ ಅಗತ್ಯವಿದೆ ಎಂದು ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶಿವಶರಣಪ್ಪ ಯಲಗೋಡ, ಜಂಟಿ ಕಾರ್ಯದರ್ಶಿ ಡಾ.ಶ್ರೀನಿವಾಸ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರವೀಂದ್ರ ಹೆಗ್ಗಡೆ ಭಾಗವಹಿಸಿದ್ದರು. ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ
ನಿರ್ದೇಶಕ ಡಾ.ಎಂ.ವಿ. ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಸಿ.ಜಯರಾಮ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement