ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಟು ಮಾತುಗಳಿಂದ ಖ್ಯಾತಿ ಪಡೆದ ಅಂಬಿಗರ ಚೌಡಯ್ಯ

Mainashree
Updated On : 31 Jan 2014, 11:38 am

ಕ.ಪ್ರ.ವಾರ್ತೆ  ರಾಮನಗರ ಜ.31
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ನಡುವೆ ಪ್ರಜ್ವಲವಾಗಿ ಬೆಳೆದ ಮಹಾನ್ ಕ್ರಾಂತಿಕಾರಿ ಅಂಬಿಗರ ಚೌಡಯ್ಯ ತಮ್ಮ ದಿಟ್ಟತನ, ಕಟು ಮಾತುಗಳಿಂದ ಖ್ಯಾತಿ ಪಡೆದರು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚೌಡಯ್ಯ ಅವರು ತಮ್ಮ ವಚನಗಳುದ್ದಕ್ಕೂ ಸತ್ಯವನ್ನೇ ಪ್ರತಿಪಾದಿಸಿದವರು ಎಂದರು.
ಮೌಢ್ಯ ನಿವಾರಣೆಗೆ ಯತ್ನ: ಸಹಸ್ರಾರು ವರ್ಷಗಳಿಂದ ಧರ್ಮ, ದೇವರ ಬಗ್ಗೆ ಜನರಲ್ಲಿ ಮೂಡಿದ್ದ ಮೌಢ್ಯ, ನಂಬಿಕೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯ ಪ್ರಯತ್ನ ಶ್ಲಾಘನೀಯ. ಅವರ ಆಚಾರ, ವಿಚಾರಗಳ ಪಾಲನೆಯಿಂದ ನಮ್ಮ ಸಮಾಜವನ್ನು ಮೂಢ ನಂಬಿಕೆಗಳಿಂದ ಮುಕ್ತಿಗೊಳಿಸಲು ಸಾಧ್ಯ ಎಂದು ಅವರು ತಿಳಿಸಿದರು.  
ಕನ್ನಡ ಸಾಹಿತ್ಯದಲ್ಲಿ 12ನೇ ಶತಮಾನದಲ್ಲಿ ರಚನೆಯಾದ ವಚನ ಸಾಹಿತ್ಯ ಸಾರ್ವಕಾಲಿಕ ಸಂದೇಶಗಳನ್ನು ನೀಡಿದೆ. ವಚನಕಾರರು ಅಸಮಾನತೆ ನಿವಾರಣೆ, ಸಮ ಸಮಾಜ ನಿರ್ಮಾಣಕ್ಕೆ ತಮ್ಮ ವಚನಗಳ ಮೂಲಕ ಪ್ರಯತ್ನಿಸಿದ್ದಾರೆ. ವಚನಗಳನ್ನು ಓದುವ ಮತ್ತು ಅಧ್ಯಯನ ನಡೆಸುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ
ಎಂದು ವಿಶ್ವನಾಥ್ ಸಲಹೆ ನೀಡಿದರು.
ಪ್ರೇರಣೆ ಅಗತ್ಯ: ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಆತ್ಮವಿಶ್ವಾಸದಿಂದ ಬದುಕಬೇಕು. ವಚನ ಸಾಹಿತ್ಯದಲ್ಲಿ ಸಮಾಜ ಸುಧಾರಣೆ ಅಂಶಗಳನ್ನು ಕಾಣಬಹುದಾಗಿದೆ. ಸದೃಢ ಸಮಾಜಕ್ಕೆ ಮಾದರಿಯಾಗಬಲ್ಲ ವಚನ ಸಾಹಿತ್ಯವನ್ನು ಓದುವಂತೆ ಮಕ್ಕಳನ್ನು ಪ್ರೇರೇಪಿಸುವುದು ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.  
ಅಂಬಿಗರ ಚೌಡಯ್ಯ ಅವರನ್ನು ಕುರಿತು ಡಾ.ಹನುಮಂತಪ್ಪ ಉಪನ್ಯಾಸ ನೀಡಿದರು. ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತಮ್ಮ, ಜಿ.ಪಂ. ಮಾಜಿ ಅಧ್ಯಕ್ಷೆ ಪದ್ಮ ಕೃಷ್ಣಯ್ಯ, ಗಂಗಾಮತಸ್ಥ ಮುಖಂಡರಾದ ಚಿನ್ನಸ್ವಾಮಿ, ರಾಜಣ್ಣ, ರಂಗಸ್ವಾಮಿ, ಚಂದ್ರಮೌಳಿ, ಭಗತ್‌ರಾಮ್, ಮಲ್ಲಯ್ಯ, ಬೀರಯ್ಯ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement