ಜಿಲ್ಲಾ ಕೇಂದ್ರ ಘೋಷಣೆ ಪರಿಶೀಲಿಸಿ ಕ್ರಮ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಜ. 31
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ಬಹುದಿನದ ಬೇಡಿಕೆಗೆ ಅಂಕಿ-ಅಂಶಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೌರಿಬಿದನೂರಿಗೆ ಕಾರ್ಯಕ್ರಮವೊಂದಕ್ಕೆ ತೆರಳುವ ಮುನ್ನ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಕಾರ್ಯಕರ್ತರು ಮತ್ತು ಸಂಘಟನೆಗಳ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಈಗಾಗಲೇ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರಿಸಿ ಆದೇಶ ನೀಡಲಾಗಿದೆ. ಜಿಲ್ಲಾ ಕೇಂದ್ರ ಘೋಷಣೆ ಕುರಿತು ಗಂಭೀರವಾಗಿ ಪರಿಶೀಲಿಸಿದ ನಂತರ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಿ ಆದೇಶ ನೀಡಿದ ಮುಖ್ಯಮಂತ್ರಿಗಳಿಗೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾಂಪ್ರದಾಯಿಕ ರೇಷ್ಮೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಈವರೆಗೆ ನಮ್ಮ ನ್ಯಾಯಬದ್ಧ ಬೇಡಿಕೆಯನ್ನು ಮನವಿಗಳ ಮೂಲಕ ಮತ್ತು ಕೆಲವೊಮ್ಮೆ ಪ್ರತಿಭಟನೆಯ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ. ಎಲ್ಲ ಬಗೆಯ ಅಂಕಿ-ಅಂಶಗಳ ತುಲನೆ ಮತ್ತು ಪರಿಶೀಲನೆಯ ನಂತರವೇ ಜಿಲ್ಲಾ ಕೇಂದ್ರ ಘೋಷಣೆಯಾಗಲಿ. ದೊಡ್ಡಬಳ್ಳಾಪುರಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಅವಕಾಶವನ್ನು ಸರ್ಕಾರ ಕೊಡಬೇಕಿದೆ. ಉಪವಿಭಾಗ ಕೇಂದ್ರಗಳೇ ಜಿಲ್ಲಾ ಕೇಂದ್ರಗಳಾಗಿ ಮಾರ್ಪಾಟಾಗಿರುವುದು ಇತಿಹಾಸ. ಅರ್ಹತೆಯ ಆಧಾರದಲ್ಲೂ ದೊಡ್ಡಬಳ್ಳಾಪುರವೇ ಜಿಲ್ಲಾ ಕೇಂದ್ರವಾಗಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿತು.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಪರ ರಾಜಕಾರಣ ಮಾಡುತ್ತಿದೆಯೇ ಹೊರತು ಯಾವುದೇ ಪೂರ್ವಾಗ್ರಹಗಳ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ಹಿತಾಸಕ್ತಿಯಲ್ಲಿ ಉನ್ನತ ಕಾರ್ಯಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಮುಖ್ಯ. ಜನ ಕೊಟ್ಟ ಅಧಿಕಾರವನ್ನು ಜನಹಿತಕ್ಕೆ ಬಳಸುವುದು ನಮ್ಮ ಉದ್ದೇಶ. ಟೀಕೆ-ಟಿಪ್ಪಣಿಗೆ ಸದಾ ಸ್ವಾಗತ ಎಂದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯ್ಲಿ, ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಸೇರಿದಂತೆ ಹಲವು ಶಾಸಕರು, ಸಚಿವರು ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.