ನೋಡೋಕೆ ರಾಗಿ ಮೂಟೆ; ಒಳಗೆ ಚಿನ್ನದ ಆಭರಣ
ರಾಮನಗರ: ಕದ್ದ ಚಿನ್ನಾಭರಣ ಮನೆಯಲ್ಲಿಟ್ಟುಕೊಂಡರೆ ಅಪಾಯವೆಂದು ತಿಳಿದ ಚಿನ್ನದ ಅಂಗಡಿ ಕೆಲಸಗಾರಪಕ್ಕದ ಮನೆಯಲ್ಲಿ ಬಚ್ಚಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ.
ರಾಮನಗರ ಜಿಲ್ಲೆ ಕುರುಬರಹಳ್ಳಿ ಚೆಲುವರಾಜೇಗೌಡ ಬಂಧಿತ ಆರೋಪಿ.
ಬೆಂಗಳೂರಿನ ಚಿನ್ನಾಭರಣ ಮಳಿಗೆಯಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಚೆಲುವರಾಜು, ಮಳಿಗೆ ಮಾಲೀಕರಿಗೆ ಗೊತ್ತಿಲ್ಲದೇ ಸ್ವಲ್ಪ ಸ್ವಲ್ಪವೇ ಚಿನ್ನಾಭರಣ ಕದಿಯುತ್ತಿದ್ದ. ಕದ್ದ ಚಿನ್ನ ಕೆಜಿ ಗಟ್ಟಲೆ ಆದಾಗ ಯಾರಿಗಾದರೂ ಅನುಮಾನ ಬಂದು ಮನೆಯಲ್ಲಿ ಶೋಧನೆ ನಡೆಸಿದರೆ ಸಿಕ್ಕಿ ಬೀಳುವ ಭಯದಿಂದ ರಾಗಿ ಮೂಟೆಯಲ್ಲಿ ಚಿನ್ನಾಭರಣ ಬಚ್ಚಿಟ್ಟು ಅದನ್ನು ಪಕ್ಕದ ಮನೆಯಲ್ಲಿರಿಸಿದ್ದ. ತನ್ನ ಮನೆಯಲ್ಲಿ ಇಲಿ ಕಾಟವಿದ್ದು ಕೆಲ ದಿನಗಳ ಮಟ್ಟಿಗೆ ನಿಮ್ಮ ಮನೆಯಲ್ಲೇ ಇರಿಸಿಕೊಳ್ಳಿ ಎಂದು 2 ಮೂಟೆಗಳನ್ನು ಪಕ್ಕದಲ್ಲೇ ವಾಸವಿರುವ ಜಯಂತಿ ಎಂಬುವರ ಮನೆಯಲ್ಲಿ ಇಟ್ಟಿದ್ದ.
ಈ ನಡುವೆ ಹಲವು ದಿನಗಳು ಕಳೆದರೂ ರಾಗಿ ಮೂಟೆ ತೆಗೆದುಕೊಳ್ಳದ ಚೆಲುವನ ವರ್ತನೆಯಿಂದ ಅನುಮಾನಗೊಂಡ ಜಯಂತಿ ಕುತೂಹಲದಿಂದ ರಾಗಿ ಮೂಟೆ ಬಿಚ್ಚಿದಾಗ ಕೆಜಿ ಗಟ್ಟಲೆ ಚಿನ್ನಾಭರಣ ಸಿಕ್ಕಿದೆ. ಅದನ್ನು ಮಾರಿಕೊಂಡ ಜಯಂತಿ ಇನ್ನೊಂದಿಷ್ಟು ಚಿನ್ನವನ್ನು ತನ್ನ ಬೆಂಗಳೂರಿನಲ್ಲಿರುವ ಸಹೋದರಿಗೆ ನೀಡಿದ್ದಾಳೆ. ಆಕೆ ಸಿಕ್ಕ ಚಿನ್ನಾಭರಣವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿದ್ದಳು. ಚಿನ್ನಾಭರಣ ಮಳಿಗೆ ಮಾಲೀಕರ ಸೂಕ್ತ ದಾಖಲೆಗಳಿಲ್ಲದ ಚಿನ್ನಾಭರಣ ಮಾರಾಟ ಮಾಡಲು ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಮಳಿಗೆಗೆ ಹೋಗಿ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಆಕೆ ತನ್ನದೇ ಚಿನ್ನಾಭರಣ ಎಂದು ಹೇಳಿದ್ದಾಳೆ. ಹೀಗಾಗಿ ಈ ಸಂಬಂಧ ದಾಖಲೆಗಳನ್ನು ತಂದು ಚಿನ್ನಾಭರಣ ತೆಗೆದುಕೊಂಡು ಹೋಗಲು ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ಮಹಿಳೆ ವಾಪಸಾಗಿದ್ದಾಳೆ.
ಚಿನ್ನಾಭರಣಕ್ಕೆ ದಾಖಲೆ ಇಲ್ಲದ ಕಾರಣ ಆಕೆ ಪೊಲೀಸ್ ಠಾಣೆಗೆ ಹೋಗುವ ಧೈರ್ಯ ಮಾಡಿಲ್ಲ. ಪೊಲೀಸರು ಕೂಡಾ ಮಹಿಳೆಯನ್ನು ವಿಚಾರಣೆ ನಡೆಸಲು ಹೋಗಿಲ್ಲ.
ಈ ನಡುವೆ ಚೆಲುವರಾಜು, ಜಯಂತಿಗೆ ಚಿನ್ನಾಭರಣ ಇಟ್ಟಿದ್ದ ಮೂಟೆ ಕೇಳಿದ್ದಾನೆ. ಆದರೆ ಆಕೆ ಮೂಟೆ ನೀಡಿದ್ದಳು. ಅದರಲ್ಲಿ ಚಿನ್ನಾಭರಣ ಇರಲಿಲ್ಲ. ಆಕೆಯೇ ತೆಗೆದುಕೊಂಡಿರಬಹುದು ಎಂದು ಅನುಮಾನಗೊಂಡ ಚೆಲುವ ಜಯಂತಿ ಹಾಗೂ ಅವರ ತಂದೆಯನ್ನು ಅಪಹರಿಸಿದ್ದ. ನಂತರ ತೆಗೆದುಕೊಂಡಿರುವ ಚಿನ್ನಾಭರಣ ವಾಪಸ್ ನೀಡಬೇಕು ಎಂದು ಬೆದರಿಕೆ ಹಾಕಿದ್ದ.
ಆಗ ತಾನು ಚಿನ್ನಾಭರಣವನ್ನು ಮಾರಿಕೊಂಡಿದ್ದು ಇನ್ನಷ್ಟು ಚಿನ್ನ ಬೆಂಗಳೂರು ಪೊಲೀಸರು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾಳೆ. ಅಲ್ಲದೇ ತನ್ನ ಬಳಿ ಇದ್ದ ಸ್ವಲ್ಪ ಚಿನ್ನವನ್ನು ಚೆಲುವನಿಗೆ ನೀಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಚೆಲುರಾಜು ಆಕೆಯ ತಂದೆಯನ್ನು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ದರ ಬೆನ್ನುಬಿದ್ದ ಪೊಲೀಸರು ಚೆಲುವರಾಜೇ ಗೌಡ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.