ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೀದಿ ನಾಯಿಗಳ ಹಾವಳಿ: 6 ಮಂದಿಗೆ ಕಡಿತ

Mainashree
Updated On : 31 Jan 2014, 11:35 am

ಕ.ಪ್ರ. ವಾರ್ತೆ ರಾಮನಗರ ಜ. 31
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಹೆಚ್ಚಿದೆ. ವಿಜಯನಗರ ಬಡಾವಣೆಯಲ್ಲಿ ಶುಕ್ರವಾರ ಒಂದೇ ಕುಟುಂಬದ ಇಬ್ಬರು ಸೇರಿದಂತೆ 5 ಮಕ್ಕಳು ಮತ್ತು ಮಹಿಳೆ ಬೀದಿ ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ.  
ಬಡಾವಣೆಯ ಮಕ್ಕಳಾದ ಜ್ಯೋತಿ, ಲಿಖಿತಾ, ಪೂರ್ವಿ, ಅನನ್ಯ, ಗಗನ್ ಮತ್ತು ಮಹಿಳೆ ಶಾರದ ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ. ಐವರು ಮಕ್ಕಳು 3 ರಿಂದ 9 ವರ್ಷದೊಳಗಿನವರು. ಈ ಪೈಕಿ ಪೂರ್ವಿ ಮತ್ತು ಅನನ್ಯ ಸಹೋದರಿಯರಾಗಿದ್ದಾರೆ.
ಶಾರದ ಮತ್ತು ಲಿಖಿತ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ 9.30ರಲ್ಲಿ ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ನಾಯಿಗಳ ಹಿಂಡು ಎರಗಿದೆ. ಹೆದರಿದ ಮಕ್ಕಳು ಓಡಿದಾಗ ಬೆನ್ನಟ್ಟಿದ ನಾಯಿಗಳು ಕಚ್ಚಿವೆ. ಬಿಡಿಸಲು ಹೋದ ಮಹಿಳೆ ಶಾರದಮ್ಮ ಅವರಿಗೂ 2-3 ನಾಯಿಗಳು ಕಚ್ಚಿವೆ.
ಇದೇ ಮೊದಲಲ್ಲ: ವಿಜಯನಗರ ಬಡಾವಣೆಯಲ್ಲಿ ಕಳೆದೊಂದು ತಿಂಗಳ ಹಿಂದಷ್ಟೇ ಒಂದೇ ದಿನ 7 ಮಂದಿ ನಾಯಿ ಕಡಿತದಿಂದ ಗಾಯಗೊಂಡಿದ್ದರು. ಆಗಲೂ ಗಾಯಗೊಂಡವರು ಮಕ್ಕಳೇ ಆಗಿದ್ದರು. ಈ ಬಡಾವಣೆಯಲ್ಲಿ ಬೀದಿ ನಾಯಿಗಳ ಕಾಟದಿಂದ ನಾಗರಿಕರು ಕಂಗೆಟ್ಟಿದ್ದಾರೆ.
ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಸ್ಥಳೀಯ ನಾಗರಿಕರು ನಗರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದಾಗ್ಯೂ ಪ್ರಯೋಜನವಾಗಿಲ್ಲ. ಇದೀಗ ಜನರ ಆಕ್ರೋಶ ಮತ್ತಷ್ಟು ಹೆಚ್ಚಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.  ಪ್ರಾಣಿ ದಯಾ ಸಂಘದ ಆಕ್ಷೇಪವನ್ನೇ ಮುಂದು ಮಾಡಿಕೊಂಡು ನಗರಸಭೆಯು ನಾಯಿಗಳ ನಿಯಂತ್ರಣಕ್ಕೆ ಹಿಂದೇಟು ಹಾಕಿದೆ. ಈಗ ಉಂಟಾಗಿರುವ ಅನಾಹುತಕ್ಕೆ ಅಧಿಕಾರಿಗಳೇ ಕಾರಣ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಬೀದಿಗಿಳಿಯಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದರು.
ಸಂಸದರಿಗೂ ದೂರು: ಗುರುವಾರವಷ್ಟೇ ಜನಸ್ಪಂದನ ಕಾರ್ಯಕ್ರಮದಡಿ ವಿಜಯನಗರ ಬಡಾವಣೆಗೆ ಭೇಟಿ ನೀಡಿದ್ದ ಲೋಕಸಭೆ ಸದಸ್ಯ ಡಿ.ಕೆ.ಸುರೇಶ್ ಅವರಿಗೂ ನಾಯಿಗಳ ಹಾವಳಿ ತಡೆಗೆ ಒತ್ತಾಯಿಸಿ ಸ್ಥಳೀಯ ನಾಗರಿಕರು ಮನವಿ ಪತ್ರ ಸಲ್ಲಿಸಿದ್ದರು.
ವಿಜಯನಗರ ಬಡಾವಣೆಯಲ್ಲಿ ಬಹುತೇಕ ಬಡವರೇ ವಾಸವಿದ್ದಾರೆ. ಬಡಾವಣೆಯಲ್ಲಿ ನಾಯಿಗಳು ಹಿಂಡು ಹಿಂಡಾಗಿ ಅಡ್ಡಾಡುತ್ತಿರುತ್ತವೆ. ಇಷ್ಟಲ್ಲದೆ, ಬಿಡಾಡಿ ದನಗಳು ಮತ್ತು ಹಂದಿಗಳೂ ತಿರುಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಸಂಸದರ ಸೂಚನೆ ಹೊರತಾಗಿಯೂ ನಾಯಿಗಳ ಹಾವಳಿ ತಡೆಯಲು ನಗರಸಭೆ ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದಾದರೆ, ಅವರಿಗೆ ಇನ್ನೆಲ್ಲಿಂದ ಆದೇಶ ಬರಬೇಕೋ ತಿಳಿಯದಾಗಿದೆ. ಇದು ನಾವೆಷ್ಟು ದರಿದ್ರ ವ್ಯವಸ್ಥೆಯಲ್ಲಿದ್ದೇವೆ ಎನ್ನುವುದರ ಸಂಕೇತ ಎನ್ನುವುದು ಸ್ಥಳೀಯರ ಹತಾಶೆಯ ನುಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement