ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Mainashree
Updated On : 31 Jan 2014, 11:35 am

ದಲಿತ ಸಮುದಾಯದ ವ್ಯಕಿಗೆ ಕ್ಷೌರ ನಿರಾಕರಣೆ: ಬಂಧನ
ಕನಕಪುರ: ದಲಿತ ಸಮುದಾಯದ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡಲು ನಿರಾಕರಿಸಿದ ಕಾರಣಕ್ಕೆ  ಪೊಲೀಸರ ಅತಿಥಿ ಯಾಗಬೇಕಾದ ಘಟನೆ ಕನಕಪುರ ತಾಲೂಕಿನ ಏಳಗಳ್ಳಿ ಗ್ರಾಮದಲ್ಲಿ ನಡೆದಿದೆ.  ಏಳಗಳ್ಳಿಯ ಸೆಲೂನ್ ಮಾಲೀಕ ಮುತ್ತುರಾಜ್ ಎಂಬುವವರು ದಲಿತ ವ್ಯಕ್ತಿಯೊಬ್ಬರಿಗೆ ಕ್ಷೌರ ಮಾಡಲು ನಿರಾಕರಿಸಿದ ಕಾರಣಕ್ಕೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಏಳಗಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಎರಡೂ ಕೋಮುಗಳ ನಡುವೆ ಸಂಘರ್ಷ, ಅಭಿಪ್ರಾಯ  ಭೇದಗಳಿದ್ದು ಕೆಲವು ವರ್ಷಗಳ ಹಿಂದೆ ಗಲಭೆಗೂ ಕಾರಣವಾಗಿತ್ತು. ಇಲ್ಲಿನ ಪ್ರಸಿದ್ಧ ತಾಯಿಮುದ್ದಮ್ಮ ದೇವಾಲಯದ ಕೊಳದಲ್ಲಿ ನೀರನ್ನು ತೆಗೆದುಕೊಳ್ಳಲು ದಲಿತರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿವಾದ ತಲೆ ಎತ್ತಿತ್ತು. ಶಾಂತಿ ಸಂಧಾನಗಳ ನಂತರ ಸಮಸ್ಯೆ ಬಗೆಹರಿದಿತ್ತು. ಕ್ಷೌರ ಮಾದಲು ಮುತ್ತುರಾಜ್‌ನಿರಾಕರಿಸಿದ ಕಾರಣ ಶಿವಕುಮಾರ್‌ಎಂಬುವವರು ಸಾತನೂರು ಠಾಣೆಗೆ ನೀಡಿದ ದೂರಿನ ಮೇರೆಗೆ ಆರಕ್ಷಕ ಉಪನಿರೀಕ್ಷಕ ಜಯರಾಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಅಪಘಾತ: ಸಾವು
ಹೊಸಕೋಟೆ: ತಾಲೂಕಿನ ಮಾಲೂರು ರಸ್ತೆ ದೇವನಗೊಂದಿ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ. ಕುಂಬಲಹಳ್ಳಿಯ ವಾಸಿ ಕೆ.ಎನ್.ಮುನಿರಾಜು (28) ಸಾವನ್ನಪ್ಪಿದ ನತದೃಷ್ಟ. ಮಾನಕನಹಳ್ಳಿಯಲ್ಲಿರುವ ತನ್ನ ಅಣ್ಣನ ಮನೆಯಿಂದ ಮೋಟರ್ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಂದೇನು?
ದೇವನಹಳ್ಳಿ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ದೇವನಹಳ್ಳಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಇಲ್ಲಿನ ಶ್ರೀ ಬಸವೇಶ್ವರ ಕಲ್ಯಾಣಮಂದಿರದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಈ ಸಮಾರಂಭಕ್ಕೆ ಪ್ರೊ. ಡಾ.ಟಿ.ಎಚ್. ಆಂಜಿನಪ್ಪ ಮುಂತಾದವರು ಭಾಗವಹಿಸಲಿದ್ದಾರೆ.  ಈ ಸಮಾರಂಭಕ್ಕೆ ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಹಾದಿ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.   
ಸಾವುಕನಹಳ್ಳಿ ಹಾಲು ಡೇರಿ ಚುನಾವಣೆಗೆ ತಡೆಯಾಜ್ಞೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಸಾವುಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2014-15 ರಿಂದ 2018-19 ರ ಸಾಲಿಗೆ ನೂತನ 9 ಮಂದಿ ನಿರ್ದೇಶಕರ ಚುನಾವಣೆ ಫೆ. 2 ರಂದು ನಡೆಯಬೇಕಿದ್ದು ಆದರೆ ಇಲ್ಲಿನ ಸಿವಿಲ್ ನ್ಯಾಯಾಲಯ ಚುನಾವಣೆಗೆ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಸಾವುಕನಹಳ್ಳಿ ಗ್ರಾಮದ ಇ. ನಂಜೇಮರಿಯಪ್ಪ, ಮೈಲಾರಪ್ಪ, ಬಿ. ಮುನೇಗೌಡ ಹಾಗೂ ಪಿ. ನಾರಾಯಣಸ್ವಾಮಿ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಹಾಲು ಡೇರಿಯ ಮತದಾರರ ಪಟ್ಟಿಯಲ್ಲಿ ದೋಷವಿರುವುದಾಗಿ ಮನವಿ ಮಾಡಿದ್ದರು. ಅರ್ಜಿದಾರರ ಪರವಾಗಿ ವಕೀಲರಾದ ಆರ್. ಪ್ರಭಾಕರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಹಾಲು ಡೇರಿಯ ಕಾರ್ಯದರ್ಶಿಯವರು ಸಂಘಕ್ಕೆ 58 ಮಂದಿ ಷೇರುದಾರರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿದ್ದಾರೆ. ಆದರೆ ಹೊಸದಾಗಿ ಸೇರ್ಪಡೆಯಾಗಲಿರುವ ಷೇರುದಾರರ ಬಗ್ಗೆ ಸಂಘದ ಮಹಾಸಭೆಯಲ್ಲಿ ಒಪ್ಪಿಗೆ ತೆಗೆದುಕೊಳ್ಳಬೇಕಾಗುತ್ತದೆ. ಆನಂತರ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಬಹುದಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ತಿಮ್ಮಪ್ಪನಹಳ್ಳಿಯಲ್ಲಿ ರಾಗಿ ಮೆದೆಗೆ ಬೆಂಕಿ, ನಷ್ಟ
ಸೂಲಿಬೆಲೆ: ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ರಾಗಿ ಹುಲ್ಲಿನ ಮೆದೆಗೆ ಯಾರೋ ದುಷ್ಕರ್ಮಿಗ ಳು ಬೆಂಕಿ ಹಚ್ಚಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಅಬ್ಬಯ್ಯಪ್ಪ ಅವರು ಗ್ರಾಮದ ತಮ್ಮ ಮನೆಯ ಮುಂದೆ ರಾಗಿ ಹುಲ್ಲಿನ ಮೆದೆಯಿಟ್ಟಿದ್ದು, ಗುರುವಾರ ಮಧ್ಯರಾತ್ರಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಪಾರ ಪ್ರಮಾಣದ ಹುಲ್ಲು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಬೆಂಕಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಕ್ಕಪಕ್ಕದ ಮನೆಯವರನ್ನು ಎಚ್ಚರಿಸಿ ಬೆಂಕಿಯನ್ನು ಆರಿಸಲು ಯತ್ನಿಸಿದ್ದಾರೆ. ಬೆಂಕಿ ತಹಬಂದಿಗೆ ಬಾರದ ಕಾರಣ ಅಗ್ನಿ ಶಾಮಕದಳದವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಸುಮಾರು 30 ಸಾವಿರದಷ್ಟು ಬೆಲೆ ಬಾಳುವಷ್ಟು ಹುಲ್ಲು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಘಟನೆ ಸ್ಥಳಕ್ಕೆ ಸೂಲಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಂಚೇಗೌಡನದೊಡ್ಡಿಯಲ್ಲಿ ಒಂಟಿ ಕಾಡಾನೆ ದಾಳಿ: ಬೆಳೆ ನಾಶ
ಕನಕಪುರ: ಕನಕಪುರ ತಾಲೂಕು ಸಾತನೂರು ಸಮೀಪದ ಕೆಂಚೇಗೌಡನದೊಡ್ಡಿ ಗ್ರಾಮದಲ್ಲಿ ಒಂಟಿ ಕಾಡಾನೆಯೊಂದು ಹೊಲದ ಮೇಲೆ ದಾಳಿ ನಡೆಸಿ ರಾಗಿ ಮೆದೆಯನ್ನು ಧ್ವಂಸಗೊಳಿಸಿದೆ. ಕಳೆದ ಮೂರು ದಿನಗಳಿಂದ ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಕಾಡಾನೆ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಕೆಂಚೇಗೌಡನದೊಡ್ಡಿ ಶಿವಣ್ಣ ಎಂಬುವವರ ಜಮೀನಿನಲ್ಲಿ ಸುಮಾರು 15 ಕ್ವಿಂಟಲ್ ಬತ್ತದ ಮೆದೆಯನ್ನು ಕಾಡಾನೆ ನಾಶಪಡಿಸಿರುವುದರಿಂದ ಹತ್ತಾರು ಸಾವಿರ ನಷ್ಟವಾಗಿದೆ, ಪಕ್ಕದ ಜಮೀನಿನಲ್ಲಿದ್ದ ಬೆಳೆದು ನಿಂತ ಹಲಸಿನಮರಕ್ಕೆ ದಾಳಿ ಇಟ್ಟ ಕಾಡಾನೆ 50ಕ್ಕೂ ಹೆಚ್ಚು ಹಲಸಿನ ಹಣ್ಣುಗಳನ್ನು ಕೆಡವಿ ನಾಶಮಾಡಿದೆ. ಅರಣ್ಯ ಇಲಾಖೆ ಆನೆ ಕಾಟವನ್ನು ತಡೆಗಟ್ಟಲು ಸಮರ್ಪಕ ಕ್ರಮಗಳನ್ನು ಕೈಗೊಂಡು ನಷ್ಟಹೊಂದಿದವರಿಗೆ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement