ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಕೊಡುಗೆ ಅವಿಸ್ಮರಣೀಯ: ರಾಜು
ಚನ್ನಪಟ್ಟಣ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಕೊಡುಗೆ ಅವಿಸ್ಮರಣೀಯವಾಗಿದ್ದು, ಮಹತ್ಮಾ ಗಾಂಧೀಜಿ ಸಾರಿದ ಶಾಂತಿ ಮತ್ತು ಅಹಿಂಸೆಯ ತತ್ವವನ್ನು ಜನತೆಗೆ ಪ್ರಚುರ ಪಡಿಸಿ ಭಾರತವನ್ನು ಸ್ವಾತಂತ್ರ್ಯ ಗೊಳಿಸಲು ಸೇವಾದಳ ಪ್ರಮುಖ ಪಾತ್ರ ವಹಿಸಿದೆ ಎಂದು ಜಿ.ಪಂ ಅಧ್ಯಕ್ಷ ಎಚ್.ಸಿ.ರಾಜು ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ಭಾರತ ಸೇವಾದಳದ ಜಿಲ್ಲಾ ಘಟಕ ಹಮ್ಮಿ ಕೊಂಡಿದ್ದ ಎರಡು ದಿನಗಳ ಭಾವೈಕ್ಯತಾ ಮೇಳವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸೇವಾದಳದ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಶಿಸ್ತು, ಸಂಯಮದ ಜತೆಗೆ ರಾಷ್ಟ್ರಪ್ರಜ್ಞೆ ಸಮಾಜ ಸೇವೆಯ ಗುಣಗಳನ್ನು ಬೆಳೆಸಿ ಕೊಳ್ಳ ಬೇಕೆಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಸು.ತ.ರಾಮೇಗೌಡ, ಮಹತ್ಮಾಗಾಂಧಿ ವಿಚಾರದ ತಳಹದಿಯ ಮೇಲೆ ಸ್ಥಾಪಿತವಾಗಿರುವ ಸೇವಾದಳ ರಾಷ್ಟ್ರ ಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಪ್ರಚುರ ಪಡಿಸುವ ಕೆಲಸ ಮಾಡುತ್ತಿದ್ದು ವಿದ್ಯಾರ್ಥಿಗಳನ್ನು ರಾಷ್ಟ್ರ ಸೇವೆಗಾಗಿ ತರಬೇತಿ ನೀಡುವ ಕಾರ್ಯವನ್ನು ಈ ಶಿಬಿರ ಮಾಡಲಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ದೇಶದ ಏಕತೆ, ಭಾವೈಕ್ಯತೆಯನ್ನು ಎತ್ತಿಹಿಡಿದು, ತಾರತ್ಯಮ್ಯವನ್ನು ಹೋಗಲಾಡಿಸಿ ಎಂದು ಮನವಿ ಮಾಡಿದರು. ಮತ್ತೋರ್ವ ಮುಖ್ಯ ಅತಿಥಿ ರಾಜ್ಯ ಶಿಕ್ಷಣ ಸಂಸ್ಥೆಗಳ ಪ್ರಕೋಷ್ಟ ಸಂಚಾಲಕ ಎಂ.ನೀಲಯ್ಯ, ಅಧ್ಯಕ್ಷತೆ ವಹಿಸಿದ್ದ ಸೇವಾದಳದ ತಾಲೂಕು ಅಧ್ಯಕ್ಷ ಪುಟ್ಟಯ್ಯ ಮಾತನಾಡಿದರು.
ಮಾಜಿ ನಗರಸಭಾಧ್ಯಕ್ಷೆ ಸುಧಾ, ಜಿಲ್ಲಾ ಸಮಿತಿ ಸೇವಾದಳದ ಕೋಶಾಧ್ಯಕ್ಷ ಕಿಶೋರ್, ಬಿಇಓ ಶಿವಪ್ಪ, ಸಿದ್ದರಾಜೇಗೌಡ, ಉಮೇಶ್ ಬಾಬು, ನಾಯಕ್, ಮಹಾಲಿಂಗಯ್ಯ, ಎಂ.ಎನ್. ಸತ್ಯನಾರಾಯಣ್, ಷಡಕ್ಷರಸ್ವಾಮಿ, ವೀರೇಗೌಡ ಮುಂತಾದವರು ಉಪಸ್ಥಿತರಿದ್ದರು.