ತಾಲೂಕು ಅಧಿಕಾರಿಗೆ ಕಿರುಕುಳ: ಆರೋಪ
ರಾಮನಗರ: ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಗಟ್ಟಲು ಮುಂದಾಗಿರುವ ತಾಲೂಕು ಅಧಿಕಾರಿ ತೇಜಾನಂದರೆಡ್ಡಿ ಅವರಿಗೆ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಕರುನಾಡ ಸೇನೆ ಸಂಘಟನೆ ಆರೋಪಿಸಿದೆ.
ಇತ್ತೀಚೆಗೆ ವರ್ಗವಾಗಿ ಬಂದಿರುವ ತೇಜಾನಂದರೆಡ್ಡಿಯ ತೇಜೋವಧೆ ಮಾಡುವ ಸಲುವಾಗಿ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಇದು ಪ್ರಾಮಾಣಿಕ, ದಕ್ಷ ಅಧಿಕಾರಿಯ ಕೈ ಕಟ್ಟಿ ಹಾಕುವ ಹುನ್ನಾರ ಎಂದು ಕರುನಾಡ ಸೇನೆ ಜಿಲ್ಲಾಧ್ಯಕ್ಷ ಜಗದೀಶ್ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ. ಅದಕ್ಕೆಲ್ಲ ಕಡಿವಾಣ ಹಾಕಲು ಮುಂದಾಗಿದ್ದೇ ತೇಜಾನಂದರೆಡ್ಡಿ ವಿರುದ್ಧದ ಪಿತೂರಿಗೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಸಂಘಟನೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹಾಜರಿಗಿಂತ ಹೆಚ್ಚಾಗಿ ನಮೂದಿಸಿ ಆಹಾರ ಪದಾರ್ಥ, ಸವಲತ್ತುಗಳ ಕಬಳಿಕೆ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಅದನ್ನು ಪತ್ತೆ ಹಚ್ಚಿ, ತಡೆದಿದ್ದೇ ತೇಜಾನಂದರೆಡ್ಡಿ ಮಾಡಿರುವ ಮಹಾಪರಾಧ ಎನ್ನುವಂತೆ ಸಿಬ್ಬಂದಿ ಬಿಂಬಿಸಿದ್ದಾರೆ ಎಂದು ಅವರು ಆರೋಪಿಸಿದರು.
ತೇಜಾನಂದರೆಡ್ಡಿ ವಿರುದ್ಧ ಕಿರುಕುಳ, ಪ್ರತಿಭಟನೆ ನಡೆಸುವುದು ಮುಂದುವರಿದಿದ್ದೇ ಆದರೆ ಅದಕ್ಕೆ ಪ್ರತಿಯಾಗಿ ತಮ್ಮ ಸಂಘಟನೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಜಗದೀಶ್ ಎಚ್ಚರಿಕೆ ನೀಡಿದರು.
ನೀರು ಇಲ್ಲವೇ ವಿಷ ಕೊಡಿ
ಯಾವ ಮೂಲದಿಂದಾದರೂ ಸರಿಯೇ, ನಮಗೆ ಕುಡಿಯಲು ಶುದ್ಧ ಮತ್ತು ಸಮರ್ಪಕ ನೀರು ಒದಗಿಸಿ. ಇಲ್ಲವೇ ವಿಷ ಕೊಡಿ ಎಂದು ದೊಡ್ಡಗಂಗವಾಡಿ ಮತ್ತು ಜಾಲಮಂಗಲ ಗ್ರಾ.ಪಂ.ಗಳ ವ್ಯಾಪ್ತಿಯ ನಾನಾ ಗ್ರಾಮಸ್ಥರು ಆಗ್ರಹಿಸಿದರು. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿ.ಪಂ. ನಿರ್ಲಕ್ಷ್ಯ ಮುಂದುವರಿಸಿದ್ದೇ ಆದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯ ಸಂದೇಶ ನೀಡಿದರು.