ಮಾದಕ ವಸ್ತುಗಳಿಗೆ ದಾಸರಾಗಬೇಡಿ
ಕ.ಪ್ರ.ವಾರ್ತೆ ರಾಮನಗರ ಜು.1
ಯುವ ಸಮುದಾಯವು ಕ್ಷಣಿಕ ಸುಖದ ಆಸೆಯಿಂದ ಮಾದಕ ವಸ್ತುಗಳಿಗೆ ಮಾರು ಹೋಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವ ಬಗ್ಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹದ ಅಂಗವಾಗಿ ಮದ್ಯ ಮತ್ತು ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಬೇವು, ಬೆಲ್ಲ ಎರಡೂ ಇರಬೇಕು. ಆದರೆ, ಇಂದಿನ ಯುವಜನತೆ ಯಾವಾಗಲೂ ಸುಖವನ್ನೇ ಬಯಸುತ್ತಾ ಕ್ಷಣಿಕ ಸುಖ ನೀಡುವ ಮಾದಕ ವಸ್ತುಗಳಾದ ಹೆರಾಯಿನ್, ಕೊಕೇನ್, ಗಾಂಜಾ, ಚರಸ್, ಮದ್ಯಕ್ಕೆ ಮಾರು ಹೋಗಿ ಬದುಕಿನ ಅವನತಿ ತಂದುಕೊಳ್ಳುತ್ತಿದೆ ಎಂದರು.
ಕಾಡುವ ಪಾಪಪ್ರಜ್ಞೆ: ಮಾದಕ ವಸ್ತುಗಳು ಹಾಗೂ ಮದ್ಯವು ಕ್ಷಣಿಕ ಸುಖದ ಅಮಲನ್ನು ಉಂಟು ಮಾಡಿದರೂ ಮನುಷ್ಯನು ಸಾಮಾಜಿಕ, ಆಧ್ಯಾತ್ಮಿಕ, ಭೌತಿಕ ಅವನತಿಗೆ ಕಾರಣವಾಗುತ್ತದೆ. ಪ್ರಮುಖವಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚು ಪ್ರಮಾಣದಲ್ಲಿ ಮಾದಕ ವಸ್ತು ಮತ್ತು ಮದ್ಯದ ದಾಸರಾಗುತ್ತಿದ್ದಾರೆ ಎಂದು ಸ್ವತಃ ವೈದ್ಯರೂ ಆದ ವೆಂಕಟೇಶ್ ಹೇಳಿದರು.
ಮದ್ಯಪಾನ ಮತ್ತು ಮಾದಕ ವಸ್ತುಗಳು ಮನುಷ್ಯನನ್ನು ಅಣು ಅಣುವಾಗಿ ಸಾಯಿಸುತ್ತವೆ. ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯ ಪಾಪ ಪ್ರಜ್ಞೆಯನ್ನು ವಿದ್ಯಾರ್ಥಿಗಳು ಹಾಗೂ ಯುವ ಜನತೆಯಲ್ಲಿ ಮೂಡಿಸಬೇಕಿದೆ. ಯಾವುದೇ ಕಾರಣಕ್ಕೂ ಇಂತಹ ದುಶ್ಚಟಗಳಿಗೆ ಒಳಗಾಗದಂತೆ ಪೋಷಕರು, ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ದೇಶದಲ್ಲಿ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಯುವ ಜನರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಚಟಕ್ಕೆ ಸಿಲುಕಿ ಬಲಿಯಾಗುತ್ತಿದ್ದಾರೆ. ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳ ಮೇಲೆ ವ್ಯಾಪಕ ದುಷ್ಪರಿಣಾಮ ಬೀರಿ ದೇಶದ ಅಭಿವೃದ್ಧಿಗೂ ತೊಡಕಾಗಲಿದೆ. ಈ ಬಗ್ಗೆ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಕರೆ ನೀಡಿದರು.
ಮಾದಕ ವಸ್ತು ಮತ್ತು ಮದ್ಯವು ವ್ಯಕ್ತಿಯ ದೇಹದ ಜತೆಗೆ ಅವರ ಕುಟುಂಬ, ಸುತ್ತಮುತ್ತಲಿನವರ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಕೆಲ ವ್ಯಸನಿಗಳು ಕೈಯಲ್ಲಿ ಹಣವಿಲ್ಲದಿದ್ದಾಗ ಕಳ್ಳತನಕ್ಕೂ ಮುಂದಾಗಬಹುದು. ಇಂತಹ ಪಾಡು ಏಕಾದರೂ ಬೇಕು ಎನ್ನುವ ಪ್ರಶ್ನೆಯನ್ನು ಪ್ರತಿಯೊಬ್ಬರೂ ಹಾಕಿಕೊಳ್ಳಬೇಕು ಎಂದರು.
ಕುತೂಹಲದಿಂದ ವಿನಾಶಕ್ಕೆ: ಮಾದಕ ವಸ್ತುಗಳು ಮತ್ತು ಮದ್ಯದ ಬಗ್ಗೆ ಹದಿಹರೆಯದವರಲ್ಲಿ ಕುತೂಹಲ ಹೆಚ್ಚು. ಈ ಕುತೂಹಲವೇ ಅವರನ್ನು ದಾಸರನ್ನಾಗಿಸುತ್ತಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ಬೀಡಿ, ಸಿಗರೇಟ್ ಹಚ್ಚಿ ನೋಡುವವರು ಪ್ರೌಢಶಾಲೆ ಮುಗಿಸುವಷ್ಟರಲ್ಲಿ ಆಲ್ಕೋಹಾಲ್ ಸೇವಿಸುವ ಹಂತಕ್ಕೆ ತಲುಪುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ಹೇಳಿದರು.
ಹರೆಯದಲ್ಲಿ ಮನಸ್ಸಿನ ಮೇಲೆ ಹಿಡಿತ ಸಾಧಿಸುವವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಅದನ್ನು ಬಿಟ್ಟು ಮದ್ಯ ಮತ್ತು ಮಾದಕ ವಸ್ತುಗಳಿಗೆ ಮಾರು ಹೋದರೆ ಜೀವನವೇ ಕಮರಿ ಹೋಗುತ್ತದೆ. ವಿದ್ಯಾರ್ಥಿಗಳು ಕ್ರೀಡೆ, ಧ್ಯಾನ, ಯೋಗದ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪ್ರೇರಣೆಗೆ ಒಳಗಾಗದಿರಿ: ಶಾಲಾ ಕಾಲೇಜುಗಳ ಕಾಂಪೌಂಡಿನ ಹೊರಗೆ ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಣೆ ಮಾಡುವಂತಹ ಅನೇಕ ವಸ್ತುಗಳು, ಪ್ರೇರೇಪಿಸುವಂತಹ ಚಲನಚಿತ್ರಗಳ ಪ್ರಚಾರ ಸಾಮಗ್ರಿಗಳು ರಾರಾಜಿಸುತ್ತಿರುತ್ತವೆ. ಅಂತಹ ಯಾವುದೇ ಆಕರ್ಷಣೆ, ಪ್ರೇರಣೆಗೆ ಒಳಗಾಗದೆ ದೃಢ ಚಿತ್ತದಿಂದ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಿ ಎಂದು ಡಿಡಿಪಿಯು ಲಿಂಗರಾಜು ಸಲಹೆ ನೀಡಿದರು.
ಎಚ್ಚರಿಕೆ ವಹಿಸಬೇಕು: ಶೇಕಡ 70ರಷ್ಟು ಪುರುಷರು ಮದ್ಯ ಮತ್ತು ಮಾದಕ ವಸ್ತುಗಳ ಅನುಭವವನ್ನು ಹೊಂದಿದ್ದಾರೆ. ದೈಹಿಕ, ಮಾನಸಿಕವಾಗಿ ಬದಲಾವಣೆ ಕಾಣಲಾಗುವ ಹದಿ ಹರೆಯದ ಹಂತದಲ್ಲಿ ಪ್ರತಿಯೊಬ್ಬರೂ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಚಿಂತಿಸಿದಾಗ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ಮನೋ ವೈದ್ಯೆ ಡಾ.ಪಿ.ರಜನಿ ಕಿವಿಮಾತು ಹೇಳಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಮೀದ್ ಖಾನ್ ಸ್ವಾಗತಿಸಿದರು. ವೈ.ಪುಟ್ಟಸ್ವಾಮಿ ನಿರೂಪಿಸಿದರು. ಅದಕ್ಕೂ ಮುನ್ನ ನಡೆದ ಜಾಥಾವನ್ನು ನಗರದ ವಾಟರ್ ಟ್ಯಾಂಕ್ ಬಳಿಯಿಂದ ಐಜೂರು ವೃತ್ತ ದವರೆಗೆ ನಡೆದ ಜಾಥಾಕ್ಕೆ ರೋಟರಿ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್, ಆರೋಗ್ಯ ಶಿಕ್ಷಣಾಧಿಕಾರಿ ಗುತ್ತಲೇಗೌಡ ಚಾಲನೆ ನೀಡಿದರು. ಸಹಾಯಕ ವಾರ್ತಾಧಿಕಾರಿ ಎಂ.ವಿ.ರಾಘವೇಂದ್ರ ಹಾಜರಿದ್ದರು.