ಕೃಷಿ ಇಲಾಖೆಯಿಂದ ವಿತರಿಸಿದ ಬೀಜ ಕಳಪೆ
ಕನಕಪುರ: ಕನಕಪುರ ತಾಲೂಕು ಪಂಚಾಯತ್ ಸರ್ವಸದಸ್ಯರ ಸಾಮಾನ್ಯಸಭೆ ತಾಪಂ ಅಧ್ಯಕ್ಷೆ ಸಿದ್ಧಿಕಾ ಪರ್ವೀನ್ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ಕೂತಗಳೆ ಲೋಕೇಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಉಷಾ ಪಾಲ್ಗೊಂಡಿದ್ದರು.
ಸಾತನೂರು ಕೃಷಿ ಇಲಾಖೆ ವತಿಯಿಂದ ಮಾತನಾಡಿ ಕೃಷಿ ಇಲಾಖೆ ವತಿಯಿಂದ ತಾಲೂಕಿನಲ್ಲಿ ರೈತರಿಗೆ ವಿತರಿಸಿರುವ ನೆಲಗಡಲೆ ಬೀಜಗಳು ಕಳಪೆ ದರ್ಜೆಯದಾಗಿದ್ದು ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದು ತಾಪಂ ಸದಸ್ಯ ಪ್ರಕಾಶ್ ಆಕ್ರೋಶ ವ್ಯಕ್ತ ಪಡಿಸಿದರು.
ಇಲಾಖೆ ವಿತರಿಸಿದ ಕಳಪೆ ಬೀಜಗಳನ್ನು ಪ್ರದರ್ಶಿಸಿ ಸ್ಪಷ್ಟೀಕರಣ ನೀಡುವಂತೆ ಕೋರಿ ಸಭೆಯಲ್ಲಿದ್ದ ಸಹಾಯಕ ಕೃಷಿ ನಿರ್ದೇಶಕ ತಿಮ್ಮೇಗೌಡ ಅವರನ್ನು ಆಗ್ರಹಿಸಿದರು. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಬಿದ್ದಿದ್ದು
ತಾಲೂಕು ಮತ್ತೊಮ್ಮೆ ಬರದ ಬೇಗೆಯನ್ನು ಎದುರಿಸುವಂತಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಮುಂದಾಗಿ ಉಳಿಮೆ ಮಾಡಿ ಜಮೀನುಗಳನ್ನು ಸಿದ್ಧಮಾಡಿ ಇಟ್ಟುಕೊಂಡಿದ್ದರೂ ಕೃಷಿ ಇಲಾಖೆ ಇನ್ನೂ ಬಿತ್ತನೆ ಬೀಜಗಳನ್ನು ವಿತರಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ಉತ್ತಮ ಗುಣಮಟ್ಟದ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ರೈತರಿಗೆ ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ತಿಮ್ಮೇಗೌಡ ಸ್ಪಷ್ಟೀಕರಣ ನೀಡಿದರು.
ತಾಪಂ ಸದಸ್ಯೆ ಸುನಂದಾ ರಮೇಶ್ ಮಾತನಾಡಿ, ಶಿಕ್ಷಣ ಇಲಾಖೆ ಪ.ಜಾತಿ, ವರ್ಗಗಳ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಅಥವಾ ದೇಣಿಗೆ ವಿಧಿಸಬಾರದೆಂದು 2010 ರಲ್ಲಿಯೇ ಸ್ಪಷ್ಟವಾಗಿ ಆದೇಶಿಸಿದ್ದರೂ ತಾಲೂಕಿನ ಹಲವಾರು ಖಾಸಗೀ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಂದ ಅಪಾರ ಪ್ರಮಾಣದ ಶುಲ್ಕ ವಸೂಲಾತಿಯಲ್ಲಿ ತೊಡಗಿವೆ. ಅವುಗಳನ್ನು ನಿಯಂತ್ರಿಸಲು ಸಮಾಜ ಕಲ್ಯಾಣ ಇಲಾಖೆ ವಿಫಲವಾಗಿದೆ ಎಂದು ಹೇಳಿದರು. ಪಶುಸಂಗೋಪನಾ ಇಲಾಖೆ ಪಶುವೈದ್ಯಕೀಯ ಶಿಬಿರಗಳಿಗೆ ಖರ್ಚುಮಾಡುತ್ತಿರುವ ಹಣದ ಬಗ್ಗೆ ವಿವರಗಳನ್ನು ಕೋರಿದ ತಾಪಂ ಸದಸ್ಯೆ ಸವಿತಾ ಸುರೇಶ್ ಅವರಿಗೆ ಉತ್ತರಿಸಿದ ಪಶುವೈದ್ಯಾಧಿಕಾರಿ ಡಾ.ವರದರಾಜಕುಮಾರ್, ಪ್ರತಿ ಶಿಬಿರಕ್ಕೆ ಸರ್ಕಾರದಿಂದ ಐದು ಸಾವಿರ ಅನುದಾನ ಬರುತ್ತಿದ್ದು ಅವುಗಳನ್ನು ಲಸಿಕೆಗಳನ್ನು ಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದರು.
ಸಾರಿಗೆ ಇಲಾಖೆ ತಾಪಂ ಸಭೆಗಳಲ್ಲಿ ಭಾಗವಹಿಸದಿರುವ ಬಗ್ಗೆ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಮರಳವಾಡಿ ಗ್ರಾಮಕ್ಕೆ ಕೊಣಾಳುದೊಡ್ಡಿ ಹಾಗೂ ಮರಿಗೌಡನದೊಡ್ಡಿ ಮಾರ್ಗವಾಗಿ ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿದರು. ತಾಪಂ ಮಾಜಿ ಅಧ್ಯಕ್ಷೆ ಸುಕನ್ಯಾರಂಗಸ್ವಾಮಿ ಹಲವಾರು ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.