ಸಭೆ ನಿರ್ಣಯಗಳಿಗೆ ಅಧಿಕಾರಿಗಳಿಂದ ಗೌರವವಿಲ್ಲ
ಚನ್ನಪಟ್ಟಣ : ತಾ.ಪಂ ಸಾಮಾನ್ಯ ಸಭೆ ನಿರ್ಣಯಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎಂದು ಅಸಮಾಧಾನಗೊಂಡ ಸದಸ್ಯರು, ತಾ.ಪಂ ಸಾಮಾನ್ಯ ಸಭೆಗೆ ಕೆಲ ತಾಸು ಅಡ್ಡಿಪಡಿಸಿದ ಘಟನೆ ಇಲ್ಲಿನ ತಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆ ಆರಂಭ ಗೊಳ್ಳುತ್ತಿದ್ದಂತೆ ಎದ್ದು ನಿಂತ ಸದಸ್ಯ ಕಾಂತರಾಜು, ಹಿಂದಿನ ಸಭೆಯ ಒಂದೇ ಒಂದು ನಿರ್ಣಯವನ್ನು ಜಾರಿಗೆ ತಂದಿಲ್ಲ ಎಂದ ಮೇಲೆ ಸಭೆ ನಡೆಸುವ ಔಚಿತ್ಯವಾದರು ಏನು ಎಂದು ಪ್ರಶ್ನಿಸಿದರು. ಇದಕ್ಕೆ ಮಾರೇಗೌಡ, ಗುರುಕುಮಾರ್, ಸೇರಿದಂತೆ ಇನ್ನಿತರ ಸದಸ್ಯರು ದನಿಗೂಡಿಸಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿ ಗೊಂಡ ಪರಿಣಾಮ ಕೆಲ ಕಾಲ ಸಭೆಯಲ್ಲಿ ಗೊಂದಲ ಮೂಡಿತು.
ಬಳಿಕ ಮಧ್ಯ ಪ್ರವೇಶಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಂಗ ಸದಸ್ಯರ ಮನ ಒಲಿಸಿ ಸಭೆ ಆರಂಭಗೊಳ್ಳುವಂತೆ ನೋಡಿಕೊಳ್ಳುವಲ್ಲಿ ಸಫಲಗೊಂಡರು. ಸಭೆಯನಿರ್ಣಯಗಳು ಜಾರಿಗೆ ಬರದಿದ್ದರೆ ಮುಂದಿನ ದಿನಗಳಲ್ಲಿ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಷರತ್ತಿನೊಂದಿಗೆ ಸದಸ್ಯರು ಸಭೆ ನಡೆಯಲು ಅನುವು ಮಾಡಿಕೊಟ್ಟರು.
ಕೃಷಿ ಅಧಿಕಾರಿಗೆ ತರಾಟೆ: ಮುಂಗಾರು ಹಂಗಾಮ ಆರಂಭಗೊಂಡಿದ್ದರೂ ಪೂರಕ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಡುವಲ್ಲಿ ಕೃಷಿ ಇಲಾಖೆ ವಿಫಲಗೊಂಡಿದೆ ಎಂದು ಸದಸ್ಯರು ಸಹಾಯಕ ಕೃಷಿ ನಿರ್ದೇಶಕಿ ವಾಣಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಳೆಇಲ್ಲವಾಗಿದೆ ಯಾದರೂ ಮುಂದಿನ ದಿನಗಳಲ್ಲಿ ಮಳೆ ಬರುತ್ತದೆ. ಮಳೆ ಬಂದ ತಕ್ಷಣ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿ ಕೊಳ್ಳ ಬೇಕಾಗಿದ್ದರಿಂದ ಸೂಕ್ತ ಗೊಬ್ಬರ ಮತ್ತು ಬಿತ್ತನೆ ಬೀಜ ದಾಸ್ತಾನಿಡುವಂತೆ ಸೂಚಿಸಿದರು.
ವಸತಿ ನಿಯಲಯಗಳ ಅವ್ಯವಸ್ಥೆ ತಾಲೂಕಿನ ಬಹುತೇಕ ಹಾಸ್ಟೆಲ್ಗಳಲ್ಲಿ ವಸತಿಮತ್ತು ಊಟೋಪಾಚಾರ ವ್ಯವಸ್ಥೆ ಸರಿಇಲ್ಲ, ಕೆಲ ಹಾಸ್ಟೆಲ್ಗಳಲ್ಲಿ ಮಕ್ಕಳಿಲ್ಲದಿದ್ದರೂ ಸುಳ್ಳು ಲೆಕ್ಕ ತೋರಿಸಿ ಸೌಲಭ್ಯಗಳನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸದಸ್ಯರು ಸಮಾಜಕಲ್ಯಾಣಾಧಿಕಾರಿ ಮತ್ತು ಸಂಬಂಧಿಸಿದ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ವಿರುದ್ಧ ಕಿಡಿಕಾರಿದರು.
ರಾತ್ರಿ ವೇಳೆ ಹಾಸ್ಟೆಲ್ಗಳಲ್ಲಿ ಸೂಕ್ತ ಭದ್ರತೆ ಕಲ್ಪಿಸಿಲ್ಲ, ಹೆಣ್ಣು ಮಕ್ಕಳ ಹಾಸ್ಟೆಲ್ಗಳಲ್ಲಿ ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ, ವಾರ್ಡನ್ಗಳಿಗೆ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುವಂತೆ ತಾಕೀತು ಮಾಡಬೇಕು, ಆಗಾಗ ಹಾಸ್ಟೆಲ್ಗೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಸೂಚನೆ ನೀಡಿದರು.
ನೌಕರನ ಪತ್ರಿಕೋದ್ಯಮಕ್ಕೆ ಕಿಡಿ: ತಾಲೂಕಿನ ಹೊಂಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಲ್ಯಾಬ್ ಟೆಕ್ನೀಷಿಯನ್ ಪುಟ್ಟಸ್ವಾಮಿಗೌಡ ಎಂಬುವರು, ಮಾಧ್ಯಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಕಾರ್ಯವೈಖರಿಯನ್ನು ಟೀಕಿಸಿ ಲೇಖನ ಬರೆಯುತ್ತಿದ್ದಾರೆ. ರಾಜಕೀಯ ಕುರಿತಾದ ಲೇಖನಗಳನ್ನು ಬರೆಯುತ್ತಾರೆ ಇದಕ್ಕೆ ಅನುಮತಿ ನೀಡಿದವರು ಯಾರು, ಇದು ಸರ್ಕಾರದ ಸೇವಾ ನಿಯಮ ಉಲ್ಲಂಘನೆಯಲ್ಲವೇ ಎಂದು ಸದಸ್ಯ ಕಾಂತರಾಜು ತಾಲೂಕು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಸಮರ್ಪಕವಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ, ತಾಲೂಕಿನಲ್ಲಿ ಯಾವ ಸಭೆ ಸಮಾರಂಭ ನಡೆದರೂ ಅಲ್ಲಿ ಹಾಜರಾಗುತ್ತಾರೆ, ಕಚೇರಿ ಸಮಯದಲ್ಲಿ ಅಲ್ಲಿಗೆ ಹೋಗಲು ಅವರಿಗೆ ಅವಕಾಶ ಕೊಟ್ಟವರು ಯಾರು, ಸಭೆ ಸಮಾರಂಭ ಮಾಡಲು ಅವರಿಗೆ ಸಂಬಳ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ತಾ.ಪಂ.ಅಧ್ಯಕ್ಷೆ ರಮ್ಯ, ಕಾರ್ಯನಿರ್ವಹಣಾಧಿಕಾರಿ ಜಯರಂಗ ಉಪಸ್ಥಿತರಿದ್ದರು.