ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಲಸಿನ ಹಣ್ಣಿಗೆ ವ್ಯವಸ್ಥಿತ ಮಾರುಕಟ್ಟೆ ದೊರಕಲಿ

Rashmi Kasaragodu
Updated On : 3 Jul 2014, 1:41 am

ಮಾಗಡಿ: ಹಲಸಿನ ಹಣ್ಣಿಗೆ ವ್ಯವಸ್ಥಿತ ಮಾರುಕಟ್ಟೆ  ದೊರಕುವ ದಿನ ಬಹಳ ದೂರವಿಲ್ಲ ಎಂದು ಎಂದು ಜಿಕೆವಿಕೆ  ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ.ಶ್ಯಾಮಲಮ್ಮ ತಿಳಿಸಿದರು.
ಅವರು ಮಾಗಡಿ ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಹಲಸಿನ ಹಣ್ಣಿನ ತಳಿಗಳ ವೈವಿಧ್ಯತೆಯ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಇಲ್ಲಿ ನಾವು ಉತ್ತಮ ತಳಿಗಳನ್ನು ಗುರುತಿಸಿ, ಕಸಿ ಮಾಡಿ, ಈ ಮೂಲಕ ರೈತರಿಗೆ ಪರಿಚಯಿಸುವುದು ಈ ನಿಟ್ಟಿನಲ್ಲಿ  ಹಲಸಿನ ಉಪಯೋಗವನ್ನು ಸಾರ್ವತ್ರಿಕವಾಗಿ ಹೆಚ್ಚಿಸಬೇಕಿದೆ. ಹಲಸನ್ನು ಸಂಸ್ಕರಿಸಿ ಅಡುಗೆಗೆ ಸಿದ್ಧರೂಪದಲ್ಲಿ  ಗ್ರಾಹಕರಿಗೆ ತಲುಪಿಸಲು ಅಗತ್ಯ ಮಾರುಕಟ್ಟೆ ಅವಶ್ಯಕತೆ ಇದೆ ಎಂದರು.
ಡಾ.ಲತಾ ಕುಲಕರ್ಣಿ ಮಾತನಾಡಿ  ಹಲಸು ಸಂಪೂರ್ಣ ರಾಸಾಯನಿಕ ಮುಕ್ತವಾಗಿದ್ದು, ಆರೋಗ್ಯ ಹಿತಕರವಾಗಿದೆ. ಇದರಲ್ಲಿ ನಾರಿನಂಶ ಇತರೆ ಪೌಷ್ಟಿಕಾಂಶಗಳು ಹೇರಳವಾಗಿದೆ. ಹಣ್ಣು ಮತ್ತು ತರಕಾರಿ ರೂಪದಲ್ಲಿ ಬಳಕೆಗೆ ಯೋಗ್ಯವಾಗಿದೆ. ಇಷ್ಟೆಲ್ಲ ಪ್ರಯೋಜನವಿದ್ದರೂ ಸಹ ಭಾರತ ದೇಶದಲ್ಲಿ ಶೇ.60 ರಿಂದ 70 ರಷ್ಟು ಹಲಸಿನ ಹಣ್ಣು ಕೊಳೆತು ನಿಷ್ಪ್ರಯೋಜಕವಾಗುತ್ತಿವೆ. ಇವುಗಳಿಗೆ ಪೂರಕವಾದ ವ್ಯವಸ್ಥಿತ ಮಾರುಕಟ್ಟೆ ಕೊರತೆ, ಮತ್ತೊಂದೆಡೆ ಸಸ್ಯಹಾರಿ ಅಷ್ಟೆ ಅಲ್ಲದೆ ಮಾಂಸಹಾರಿ ಅಡುಗೆಯಲ್ಲಿಯೂ ಬಳಸಲು ಸಾಧ್ಯವಿರುವ ಹಲಸನ್ನು ಸಂಸ್ಕರಣೆಗೆ ಹೆದರಿ ಹೊರಗಿಟ್ಟಿರುವುದು ಇಷ್ಟಕ್ಕೆಲ್ಲ ಕಾರಣವಾಗಿದೆ. ಹಲಸು ವರ್ಷವಿಡಿ ದೊರಕುವಂತೆ ಸಂಸ್ಕರಿಸುವ ಮೂಲಕ ಹೊಸಹೊಸ ತಂತ್ರಜ್ಞಾನದಡಿ ಆವಿಷ್ಕಾರ ಮಾಡುವ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ಬಹುಭಾಗಗಳಲ್ಲಿ ಹಲಸನ್ನು ಬಳಸಲಾಗುತ್ತಿದೆ. ಆಹಾರ ಭದ್ರತೆ, ಗ್ರಾಮೀಣ ಆರ್ಥಿಕತೆ, ಹವಾಮಾನ ಬದಲಾವಣೆ, ಈ ಎಲ್ಲಾ ಆತಂಕಗಳಿಗೆ ಹಲಸು ಕೃಷಿ ಬಹಳ ಉತ್ತಮವಾಗಬಲ್ಲದು. ತಳಿ ಸಂರಕ್ಷಣೆ, ಮಾರುಕಟ್ಟೆ, ಮೌಲ್ಯವರ್ಧನೆ ಹೀಗೆ ಹಲಸಿಗಾಗಿ ವಿವಿಧ ರೀತಿಯ ಸಂಶೋಧನೆ ಸಹ ಆರಂಭಗೊಂಡಿರುವುದು ನಿಜಕ್ಕೂ ಶ್ಲಾಘನೀಯವಾದುದು ಎಂದರು. ಹೊಲ, ತೋಟ, ಹಿತ್ತಲಲ್ಲಿ ಬೆಳೆಯುವ ಹಲಸು ಗ್ರಾಮೀಣ ಜನರ ಕುಟುಂಬದ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ಚಿಕ್ಕಮಗಳೂರಿನ ಚಿಕ್ಕಸಕ್ಕರೆಕೆರೆಯ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಶಿವಣ್ಣ ಹೇಳಿದರು.
ಜಿಲ್ಲೆಯಿಂದ 30ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ವೈವಿಧ್ಯತೆಯ ಹಲಸು ತಳಿಗಳನ್ನು ತಂದು ಪ್ರದರ್ಶಿಸಿದರು. ಇದರಲ್ಲಿ ಅತ್ಯುತ್ತಮ ತಳಿಗಳನ್ನು ಆಯ್ಕೆ ಮಾಡಿ 8 ಮಂದಿ ರೈತರಿಗೆ ಬಹುಮಾನ ವಿತರಿಸಲಾಯಿತು. ಕೆವಿಕೆ ಮುಖ್ಯಸ್ಥ ಡಾ. ನಾಗರಾಜು, ಡಾ. ಕೇಶವ, ವಿಷಯ ತಜ್ಞರು  ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement