ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾವೇರಿ ನದಿ ಪಾತ್ರದಲ್ಲಿ ಅಕ್ರಮ ರೆಸಾರ್ಟ್: ಆರೋಪ

Rashmi Kasaragodu
Updated On : 5 Jul 2014, 12:44 pm

ರಾಮನಗರ: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘಿಸಿ ಕಾವೇರಿ ನದಿ ಪಾತ್ರದಲ್ಲಿ ರೆಸಾರ್ಟ್ಗಳು ಅಕ್ರಮವಾಗಿ ತಲೆ ಎತ್ತುತ್ತಿರುವ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಆರೋಪಿಸಿದರು. ಕರ್ನಾಟಕದಿಂದ ತಮಿಳುನಾಡಿಗೆ ಹರಿದು ಹೋಗುವ ಕಾವೇರಿ ನದಿ ಪಾತ್ರವನ್ನು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಭಯಾರಣ್ಯವೆಂದು ಘೋಷಿಸಿದ್ದಾಗ್ಯೂ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು. ಈ ಅಭಯಾರಣ್ಯದಲ್ಲಿ ರೆಸಾರ್ಟ್ಗಳು ನಿರಂತರವಾಗಿ ತಲೆ ಎತ್ತುತ್ತಲೇ ಇರುವ ಪರಿಣಾಮ ಅಪಾರವಾಗಿರುವ ವನ್ಯ ಸಂಪತ್ತು, ವನ್ಯ ಜೀವಿ ಸಂಕುಲಕ್ಕೆ ಧಕ್ಕೆ ಉಂಟಾಗುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅವರು ಹೇಳಿದರು. ಅಭಯಾರಣ್ಯ ಘೋಷಣೆ ಬಳಿಕವೂ ಮುತ್ತತ್ತಿ ವನ್ಯಜೀವಿ ವಲಯದಲ್ಲಿ ಭೀಮೇಶ್ವರಿ ರೆಸಾರ್ಟ್, ಸಂಗಮ ಸಮೀಪ ಗಾಳಿಬೋರೆ ಜಂಗಲ್ ಲಾಡ್ಜಸ್, ಶಾಂತಿಧಾಮ ರೆಸಾರ್ಟ್, ತಮಿಳುನಾಡು ಗಡಿಯ ಗೋಪಿನಾಥಂ ಬಳಿಯ ರೆಸಾರ್ಟ್ಗಳು ಅಡೆತಡೆ ಇಲ್ಲದೆ ನಡೆಯುತ್ತಿರುವ ಬಗ್ಗೆ ಅವರು ಶಂಕೆ ವ್ಯಕ್ತಪಡಿಸಿದರು.
ಪೂರ್ವಾನುಮತಿ ಇಲ್ಲ: ಖಾಸಗಿ ರೆಸಾರ್ಟ್ಗಳು ಮಾತ್ರವಲ್ಲದೆ ಸರ್ಕಾರಿ ಸ್ವಾಮ್ಯದಲ್ಲಿರುವ ಭೀಮೇಶ್ವರಿ, ಗಾಳಿಬೋರೆ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸ್ಥಾಪನೆಗೆ ಕೇಂದ್ರ ಪರಿಸರ ಸಚಿವಾಲಯದಿಂದ ಪೂರ್ವಾನುಮತಿ ಪಡೆದುಕೊಳ್ಳಲಾಗಿಲ್ಲ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದರು. ರೆಸಾರ್ಟ್ಗಳಿಂದ ಕೇಂದ್ರ ಅರಣ್ಯ ಸಂರಕ್ಷಣಾ ಕಾಯಿದೆ 1980 ಹಾಗೂ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸ್ಪಷ್ಟ ಉಲ್ಲಂಘನೆ ಆಗಿದೆ. ಅಭಯಾರಣ್ಯದ ಹಿತದೃಷ್ಟಿಯಿಂದ ಎಲ್ಲ ಲಾಡ್ಜ್, ರೆಸಾರ್ಟ್ಗಳನ್ನು ಮುಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement