ಕ್ರೀಡಾಂಗಣ ನಿರ್ಮಾಣ: ಸಚಿವರ ಅಭಯ
ಚನ್ನಪಟ್ಟಣ: ಅನ್ನಭಾಗ್ಯ, ಕ್ಷೀರಭಾಗ್ಯ ಮೊದಲಾದ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಹಣ ನೀಡಿರುವ ಹಿನ್ನೆಲೆಯಲ್ಲಿ ಕ್ರೀಡಾಕ್ಷೇತ್ರಕ್ಕೆ ನೆರವು ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಯುವಜನ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದರು.ಇಲ್ಲಿನ ಬಾಲಕರ ಕಾಲೇಜು ಮೈದಾನದಲ್ಲಿ ನಡೆದ 6ನೇ ಡಿಪಾರ್ಟ್ ಮೆಂಟಲ್ ಇಂಟರ್ನ್ಯಾಷನಲ್ ಪುರುಷರ ಕಬಡ್ಡಿ ಚಾಂಪಿಯನ್ಷಿಪ್ ಮತ್ತು ಅಖಿಲ ಭಾರತ ಮಹಿಳೆಯರ ಕಬಡ್ಡಿ ಚಾಂಪಿಯನ್ಷಿಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಜನಪರ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಹಣ ಖರ್ಚಾಗುತ್ತಿದ್ದು, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂಬ ಸಂಗತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು.
ದೇಸಿ ಕ್ರೀಡೆಗೆ ಪ್ರೋತ್ಸಾಹ ದೊರಕಲಿ: ದೇಸಿ ಕ್ರೀಡೆಯಾಗಿರುವ ಕಬಡ್ಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಅಂತರ ರಾಷ್ಟ್ರಮಟ್ಟದಲ್ಲಿ ಈಕ್ರೀಡೆಗೆ ಹೆಚ್ಚಿನ ಮಾನ್ಯತೆ ದೊರೆಯುತ್ತಿದ್ದು, ತಾಲೂಕಿನ ಬಿ.ಸಿ.ರಮೇಶ್ ಮತ್ತು ಬಿ.ಸಿ.ಸುರೇಶ್ ಸಹೋದರರು ಕಬಡ್ಡಿ ಜನಪ್ರಿಯತೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸಕ್ತ ಕ್ರೀಡಾಕೂಟಕ್ಕೆ ಇಲಾಖೆ ರು.3ಲಕ್ಷಅನುದಾನ ಬಿಡುಗಡೆ ಮಾಡಲಿದೆ. ಮುಂದಿನ ದಿನಗಳಲ್ಲಿ ಇಂತಹ ಕ್ರೀಡಾಕೂಟಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಲಾಗುವುದು. ಸಾರ್ವಜನಿಕರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡಾ ಕೂಟದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ತಾಲೂಕಿಗೆ ಕ್ರೀಡಾಂಗಣ: ಕ್ರೀಡಾಕ್ಷೇತ್ರಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟಕ್ಕೆ ಕ್ರೀಡಾಪಟುಗಳನ್ನು ಕೊಡುಗೆ ನೀಡಿದ ಈ ನೆಲದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ಕಾರ ಉತ್ಸಾಹದಿಂದಿದ್ದು, ನಾಲ್ಕು ನೂರು ಮೀಟರ್ ಓಟದ ಟ್ರಾಕ್ ಹೊಂದಿರುವ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಹಣ ಬಿಡುಗಡೆಗೊಂಡಿದ್ದು, ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದರು. ಶಾಸಕ ಸಿ.ಪಿ.ಯೋಗೇಶ್ವರ್ ಏಷಿಯನ್ ಕಬಡ್ಡಿ ಫೆಡರೇಶನ್ ಅಧ್ಯಕ್ಷ ಜನಾರ್ದನಸಿಂಗ್ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ.ರಮೇಶ್ .ಎಕೆಎಸ್ಐ ಪ್ರಧಾನ ಕಾರ್ಯದರ್ಶಿ ದಿನೇಶ್ ಪಟೇಲ್, ನಗರಸಭೆ ಉಪಾಧ್ಯಕ್ಷ ಮುದ್ದುಕೃಷ್ಣ, ಸದಸ್ಯರಾದ ರಾಮು, ರಮೇಶ್ಗೌಡ, ಕಾಂಗ್ರೆಸ್ ಮುಖಂಡರಾದ ಟಿ.ಕೆ.ಯೋಗೇಶ್, ಮಲವೇಗೌಡ, ಶೇಖರ್, ಕುಳ್ಳಪ್ಪ, ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಪದಾಧಿಕಾರಿಗಳು ಭಾಗವಹಿಸಿದ್ದರು.