ಚರ್ಮ ಕುಶಲ ಕರ್ಮಿಗಳ ಸ್ವಾವಲಂಬನೆಗೆ ಯೋಜನೆ: ಶಾಸಕ ಟಿ. ವೆಂಕಟರಮಣಯ್ಯ
ದೊಡ್ಡಬಳ್ಳಾಪುರ: ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ನೇತೃತ್ವದಲ್ಲಿ ತರಬೇತಿ ಪಡೆದ ಚರ್ಮ ಕುಶಲಕರ್ಮಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸುವ ಕಾರ್ಯಕ್ರಮ ತಾಲೂಕಿನ ಕೂಗೋನಹಳ್ಳಿ ಕಾಲೊನಿಯಲ್ಲಿ ನಡೆಯಿತು.ಶಾಸಕ ಟಿ. ವೆಂಕಟರಮಣಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಸಮಸ್ತ ಪರಿಶಿಷ್ಟರ ಏಳಿಗೆಗೆ ಲಿಡ್ಕರ್ ನಿಗಮವು ಹಮ್ಮಿಕೊಂಡಿರುವ ನಾನಾ ಯೋಜನೆಗಳಲ್ಲಿ ಒಂದಾದ ನಿರಂತರ ಉದ್ಯೋಗ ಯೋಜನೆ ಅಡಿಯಲ್ಲಿ ದಲಿತ ಮಹಿಳೆಯರಿಗೆ ಚರ್ಮ ಉತ್ಪನ್ನಗಳ ತಯಾರಿಕೆ ತರಬೇತಿ ನೀಡಿ, ಸ್ವತಂತ್ರವಾಗಿ ಉದ್ಯೋಗ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ ಬದುಕಲು ಜೀವನೋಪಾಯ ಮತ್ತು ಆದಾಯ ಗಳಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಫಲಾನುಭವಿಗಳು ಯೋಜನೆಯ ಲಾಭ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ ಎಂದರು. .ವಿತರಣೆಕಾರ್ಯಕ್ರಮದಲ್ಲಿ ನಾನಾ ರೀತಿಯ ತಯಾರಿಕಾ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ, ಟೂಲ್ ಕಿಟ್, ಸೋಲ್ ಕಂಪ್ರೆಸ್ಸಿಂಗ್ ಯಂತ್ರ, ಬಪ್ಪಿಂಗ್ ಯಂತ್ರ, ಶೂ ಲಾಸ್ಟ್, ನಾಗರಿಕ ಸುರಕ್ಷ ವಿಮಾ ಪತ್ರ, ರು. 3750 ಶಿಷ್ಯ ವೇತನ, ವಿಶೇಷ ದುಡಿಮೆ ಬಂಡವಾಳವಾಗಿ ರು. 2 ಸಾವಿರ ಇತ್ಯಾದಿ ಸವಲತ್ತುಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ ಎನ್. ರಾಜಶೇಖರ್, ಪ್ರಭಾ, ಅಶ್ವತ್ಥಮ್ಮ, ಕೆ.ಎಸ್.ಬಂಗೇರಾ, ಕಲ್ಪನಾ, ಮಂಜುಳಾ, ಶ್ಯಾಮಲ, ಗೋವಿಂದರಾಜು, ಶಶಿಧರ್, ರಾಮಮೂರ್ತಿ, ಜಯಲಕ್ಷ್ಮಮ್ಮ, ಸಿದ್ಧರಾಜು, ವೀರಭದ್ರಯ್ಯ, ಮಂಜುನಾಥ್, ಸಿಸ್ಟರ್ ಪ್ರೆಸಿಲ್ಲಾ, ರಾಜಣ್ಣ, ಹನುಮೇಗೌಡ, ಮುನಿಚನ್ನಪ್ಪ ಮತ್ತಿತರರು ಭಾಗವಹಿಸಿದ್ದರು.